ನಾಡಿಗೆ ಒಳಿತಾಗಲಿ, ಮಳೆ ಸುರಿಯಲಿ ಎಂಬ ಭಕ್ತನ ವಿಶಿಷ್ಟ ಧಾರ್ಮಿಕ ನಂಬಿಕೆ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಜನ-ಜಾನುವಾರುಗಳಿಗೆ ನೀರಿನ ಕೊರತೆ ನೀಗಲಿ ಎಂಬ ಧಾರ್ಮಿಕ ನಂಬಿಕೆಯಿಂದ ತಂಪು ಪಾನೀಯ ಮಾರಾಟ ಮಾಡುವ ಗೂಡಂಗಡಿ ಮಾಲೀಕರೊಬ್ಬರು ತಮ್ಮ ಅಂಗಡಿಯ ಫ್ರಿಜ್‌ನಲ್ಲೇ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಗಮನ ಸೆಳೆಯುತ್ತಿದೆ.
ಅನಾವೃಷ್ಟಿಯಿಂದ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ವಿಘ್ನವಿನಾಯಕ ಗಣೇಶನ ಆರಾಧನೆಯ ಮೂಲಕ ನಾಡಿನಲ್ಲಿ ಮಳೆ ಸಮೃದ್ಧಿಯಾಗಲಿ ಹಾಗೂ ಎಲ್ಲರಿಗೂ ಒಳಿತಾಗಲಿ ಎಂಬ ಆಶಯದಿಂದ ಈ ವಿಶಿಷ್ಟ ರೀತಿಯ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಗೂಡಂಗಡಿ ಮಾಲೀಕ ಮಲ್ಲಿನಾಥ ಕಳಸಿ ತಿಳಿಸಿದ್ದಾರೆ.
ಮುಖಂಡ ಸಿದ್ದು ಮ್ಯಾಕೇರಿ ಮಾತನಾಡಿ, ಮಳೆ ಕೊರತೆಯಿಂದ ರೈತರು ಹಾಗೂ ಗ್ರಾಮೀಣ ಭಾಗದ ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ವರುಣನ ಆಗಮನದಿಂದ ಉತ್ತಮ ಮಳೆಯಾಗಲಿ, ನಾಡು ಸುಭಿಕ್ಷವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಈ ವಿಶಿಷ್ಟ ಧಾರ್ಮಿಕ ಆಚರಣೆ ನಡೆಸಲಾಗಿದೆ. ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ ಗಣೇಶನನ್ನು ಶುಕ್ರವಾರ ಸಂಜೆ ಸಂಭ್ರಮ ಸಡಗರದಿಂದ ವಿಸರ್ಜಿಸುವುದಾಗಿ ತಿಳಿಸಿದ ಅವರು, ಸರ್ಕಾರ ಈ ಕೂಡಲೇ ಅನಾವೃಷ್ಟಿಯಿಂದ ಹಾನಿಯಾದ ಈ ಭಾಗದ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಫ್ರಿಜ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕುತೂಹಲದಿಂದ ಆಗಮಿಸಿ ವಿಶೇಷ ಪೂಜೆ ಹಾಗೂ ಪ್ರತಿಷ್ಠಾಪನೆಯನ್ನು ವೀಕ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಬಳಸುವ ಫ್ರಿಜ್ ಭಕ್ತಿಯ ಪ್ರತೀಕವಾಗಿ ಮಾರ್ಪಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ವೇಳೆ ಹಿರಿಯ ಸಾಹಿತಿ ಬಿ. ಎಂ. ರಾವ್, ಬಸವರಾಜ ನೀಲಗಾರ, ಪುಂಡಲೀಕ ಯಳಮೇಲಿ, ಪ್ರಕಾಶ ಮಂಗಳೂರು ಹಾಗೂ ಇತರರಿದ್ದರು.
ಸಾಂಪ್ರದಾಯಿಕ ದೃಷ್ಟಿಕೋನ
ಧಾರ್ಮಿಕ ಸಂಪ್ರದಾಯದ ಪ್ರಕಾರ, ಗಣೇಶನ ವಿಗ್ರಹವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ, ಶುದ್ಧವಾದ ಪೂಜಾ ಕೋಣೆಯಲ್ಲಿ ಅಥವಾ ಸ್ವಚ್ಛವಾದ ಕಪಾಟಿನಲ್ಲಿ ಇರಿಸುವುದು ಉತ್ತಮ. ಈ ಸ್ಥಳಗಳು ಸಕಾರಾತ್ಮಕ ಶಕ್ತಿಯ ಹರಿವಿಗೆ ಸಹಾಯಕ ಎಂದು ಪರಿಗಣಿಸಲಾಗುತ್ತದೆ.
ಆದರೆ, ಸಾಂಪ್ರದಾಯಿಕ ನಿಯಮಗಳಿಗಿಂತ ಭಕ್ತಿಯ ಉದ್ದೇಶವೇ ಹೆಚ್ಚು ಮುಖ್ಯ. ನಿಮ್ಮ ಪ್ರಾರ್ಥನೆಯು ಪ್ರಾಮಾಣಿಕವಾಗಿದ್ದರೆ ಮತ್ತು ವಿಗ್ರಹದ ಮೇಲೆ ಗೌರವವಿದ್ದರೆ, ಸ್ಥಳದ ಕುರಿತಾದ ಕಟ್ಟುನಿಟ್ಟಾದ ನಿಯಮಗಳು ನಿಮ್ಮ ಮನಸ್ಸನ್ನು ಕಟ್ಟಿಹಾಕಬಾರದು. ಈ ಘಟನೆಯಲ್ಲಿ ಮಲ್ಲಿನಾಥ ಕಳಸಿ ಅವರ ಪ್ರಾರ್ಥನೆಯು ಸಮಾಜದ ಒಳಿತಿಗಾಗಿ, ರೈತರ ಬದುಕಿಗಾಗಿ ಎಂಬುದು ಸ್ಪಷ್ಟವಾಗಿದೆ. ಭಕ್ತಿಯ ಭಾವನೆಯೇ ಇಲ್ಲಿ ಪ್ರಧಾನವಾಗಿದೆ.

