ಲೇಖನ- ರಶ್ಮಿ ಕೆ ವಿಶ್ವನಾಥ್.ಮೈಸೂರ
ಉದಯರಶ್ಮಿ ದಿನಪತ್ರಿಕೆ
‘ದೀಪದಿಂದ ದೀಪವಾ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಬೆಳಗಲೂ..ʼ
ಎಂಬ ಹಾಡನ್ನು ಕೇಳುತ್ತಲೇ ಬೆಳೆದ, ಪ್ರತೀಕ್ಷಣವೂ ಸಂಭ್ರಮದಿಂದ ದೀಪಾವಳಿ ಆಚರಿಸುವ ನಮಗೆ ಡಿಸೆಂಬರ್ ೧೦, ೨೦೨೫ರಲ್ಲಿ ಯುನೆಸ್ಕೊ(UNESCO) ಸಂಸ್ಥೆಯ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ(Representative List of the Intangible Cultural Heritage of Humanity)ಗೆ ಭಾರತೀಯರ ದೀಪಾವಳಿ ಹಬ್ಬ ಸೇರಿದೆ ಎಂಬ ಸಂತಸವನ್ನು ನಮ್ಮ ಪ್ರಧಾನಿ ಮೋದಿಜಿ ಹಂಚಿಕೊಂಡಾಗ, ಉಂಟಾದ ಸಂತಸ ಮೈನವಿರೇಳಿಸುವಂಥದ್ದು. ಜೊತೆಯಲ್ಲಿಯೇ ಆ ನಿಟ್ಟಿನಲ್ಲಿ ಜವಾಬ್ದಾರಿಯನ್ನು ಸಹ ಹೆಚ್ಚಿಸುವಂಥದ್ದು
ಆದರೆ ಬೆಳಕಿನ ಹಬ್ಬ ದೀಪಾವಳಿಯನ್ನು ಎಷ್ಟು ಜವಾಬ್ದಾರಿಯಿಂದ ಆಚರಿಸುತ್ತಿದ್ದೇವೆ ಎಂಬುದು ಒಮ್ಮೆ ಯೋಚಿಸಬೇಕಾದ ವಿಷಯ. ದೀಪದಿಂದ ದೀಪ ಹಚ್ಚುವುದರ ಬದಲಿಗೆ ಪಟಾಕಿಯಿಂದ ಪಟಾಕಿ ಹಚ್ಚುವುದೇ ಹೆಚ್ಚಾಗಿಬಿಟ್ಟಿದೆ.
“ಪಟಾಕಿ ಹೊಡಿಬೇಡಿ, ಚೂರುಪಾರು ಉಳಿದುಕೊಂಡಿರುವ ಒಳ್ಳೆಯ ವಾತಾವರಣವನ್ನು ಹಾಳುಮಾಡಬೇಡಿ” ಎಂದು ಹೇಳುತ್ತಲೇ ಇದ್ದರೂ, ಕೇಳದೆ ಮುಂದುವರೆಸುವ, ಮುಂದುವರೆಯುವ ಪಟಾಕಿ ಶಬ್ದವನ್ನು ಸಹಿಸುವುದೇ ತ್ರಾಸವಾಗಿಬಿಟ್ಟಿದೆ. ರಾತ್ರಿಯೆಲ್ಲ ಪಟಾಕಿ ಹೊಡೆಯುತ್ತಲೇ ಇದ್ದರೆ, ಇತರೆ ಜನರಿಗೆ ಎಷ್ಟು ತೊಂದರೆ ಆಗಬಹುದು, ವಾತಾವರಣ ಎಷ್ಟು ಹಾಳಾಗಬಹುದು, ಅದು ಪಕ್ಷಿಸಂಕು¯ದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಬೇಕಾಗಿದೆ.
ಶಬ್ದ ಮಾಲಿನ್ಯ, ವಾಯುಮಾಲಿನ್ಯ ಎರಡನ್ನೂ ಮಾಡಿ. ಇಷ್ಟು ದುಷ್ಪರಿಣಾಮ ಬೀರುವ ಪಟಾಕಿ ಉತ್ಪಾದನೆಗೆ ಯಾವ ಉದ್ದೇಶಕ್ಕಾಗಿ ಉತ್ತೇಜನ ಸಿಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ
ಮಧ್ಯಪಾನ ಮಾಡುವುದು ಅಪರಾದ ಎಂದು, ಡ್ರಿಂಕ್ಸ್ ಮಾಡಿ ವಾಹನ ಚಲಾಯಿಸಿದರೆ ದಂಡ ವಿಧಿಸಲಾಗುತ್ತದೆ. ಅದರೆ ಬಾರ್‌ಗಳನ್ನು ತೆರೆಯಲು ಮಾತ್ರ ಪರವಾನಗಿ ಸಿಗುತ್ತಲೇ ಇದೆ.
ಹುಡುಗಿಯ ಪ್ರೀತಿಯಲ್ಲಿ ಬಿದ್ದರೆ ಖುಷಿಗೆ ಕುಡಿಯುವುದು. ಅವಳು ಕೈಕೊಟ್ಟರೆ ದುಃಖಕ್ಕೆ ಕುಡಿಯುವುದು. ವ್ಯಾಪಾರದಲ್ಲಿ ನಷ್ಟವಾದರೆ ಬೇಸರದಿಂದ ಕುಡಿಯುವುದು. ಆದಾಯ ಹೆಚ್ಚಿದರೆ ಆ ಹಣವನ್ನು ಕರಗಿಸುವುದಕ್ಕೆ ಗೆಳಯರೊಂದಿಗೆ ಕೂಡಿ ಕುಡಿಯುವುದು. ನೋವು ಹೆಚ್ಚಾದರು ಕುಡಿಯೋದು, ಸಂತಸ ಜಾಸ್ತಿಯಾದರು ಕುಡಿಯೋದು. ಅವಮಾನ ಆದರು ಕುಡಿಯೋದು ಸನ್ಮಾನ ಆದರು ಕುಡಿಯೋದು. ಇವಾಗತ್ತಾನೆ ಹರೆಯಕ್ಕೆ ಬರುತ್ತಿರುವವರೂ ಕುಡಿಯುತ್ತಾರೆ, ಹರನ ಹತ್ತಿರ ಹೋಗಲು ದಿನ ಎಣಿಸುತ್ತಿರುವವರೂ ಸಹ ಕುಡಿಯುತ್ತಾರೆ. ಏನೋ ಒಂದು ಒಟ್ಟಿನಲ್ಲಿ ಎಲ್ಲದಕ್ಕು ಕುಡಿಯೋದೆ. ತಾವು ಗಳಿಸಿರೋ ಹಣವನ್ನು, ದೇವರು ಕೊಟ್ಟಿರೋ ಲಿವರನ್ನ ಹಾಳುಮಾಡಿಕೊಳ್ಳುವತನಕ ಕುಡಿತ್ತಾನೇ ಇರುವುದು. ಮಧ್ಯಪಾನ ಸೇವನೆಯಿಂದ ಸಂಸಾರ ಕಲಹಗಳು, ಸಾಮಾಜಿಕ ಕಲಹಗಳು ನಿತ್ಯವೂ ನಡೆಯುತ್ತಲೇ ಇವೆ. ಆದರೂ ಮಧ್ಯಪಾನದ ಮಾರಾಟ ಹೆಚ್ಚಾಗುತ್ತಿದೆ ಎಂದರೆ, ಏನೆಂದು ತಿಳಿಯುವುದು?
ಸಿಗರೇಟ್ ಮೇಲೆ “ಆರೋಗ್ಯಕ್ಕೆ ಹಾನಿಕಾರಕ” ಎಂದು ಬರೆಸಿ, ಅದೇ ಸಿಗರೇಟನ್ನ ತಯಾರಿಸಿ ಮಾರಲು ಪರವಾನಗಿ ಕೊಡುವುದು, ‘ಇರುವ ವಿಷಯವನ್ನು ತಿಳಿಸಿಕೊಡುತ್ತಿದ್ದೇವೆ. ಅಷ್ಟಾದಮೇಲೂ ಬಳಸಿದರೆ ಅವರಿಷ್ಟ’ ಎಂದಿರಬಹುದೆ? ಅದು ತಿಳಿಯದು

ಪ್ಲಾಸ್ಟಿಕ್ ಕವರ್ ಬಳಸಿದರೆ ದಂಡ ಕೊಡಬೇಕಾಗುತ್ತದೆ ಎಂಬ ಭಯದಲ್ಲಿ, ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳು ಹೊರಗೆ ಕಾಣಿಸದಂತೆ ಬಚ್ಚಿಟ್ಟುಕೊಂಡು ಕೊಡುತ್ತಾರೆ. ಆದರೆ ಇಲ್ಲಿ ಹೀಗೆ ಪುಟ್ಟ ಪುಟ್ಟದಾಗಿ ಪರಿಶೀಲಿಸಿ ಫೈನ್ ಹಾಕಿ ಭಯ ಹುಟ್ಟಿಸುವ ಬದಲಿಗೆ, ನೇರವಾಗಿ ಅದರ ಉತ್ಪಾದನೆಯಲ್ಲೊ ಅಥವಾ ಡೀಲರ್‌ಗಳ ಹಂತದಲ್ಲೊ ಅಂದರೆ ಮೂಲ ಹಂತದಲ್ಲೆ ಕ್ರಮ ಕೈಗೊಳ್ಳಬಹುದಲ್ಲ?
ಡ್ರಗ್ಸ್ ಮಾಫಿಯಾ ಎಷ್ಟರಮಟ್ಟಿಗೆ ಮುಂದುವರೆದಿದೆ ಎಂದರೆ, ಶಾಲಾ-ಕಾಲೇಜು ಮಕ್ಕಳುಗಳಿಗೆಲ್ಲ ‘ಎಲ್ಲಿ ಸಿಗುತ್ತದೆ’ ಎಂಬ ಬಗ್ಗೆ ಅರಿವಿರುವಷ್ಟು ಸುಲಭವಾಗಿ ಎಲ್ಲರಿಗು ದೊರೆಯುತ್ತಿದೆ. ಅದಕ್ಕೆ ಕಡಿವಾಣ ಹಾಕಲಾಗುತ್ತಿಲ್ಲವೆ?
ಮೆಲ್ಲಗೆ ಮಗುವನ್ನು ಚಿವುಟಿ ಆಮೇಲೆ ಸಮಾಧಾನ ಮಾಡುವ ಹಾಗೆ ನಟಿಸುವಂತೆ, ಅತ್ತ ತೆರಿಗೆಯ ಆದಾಯ ಹೆಚ್ಚಿಗೆ ಬರುವ ಎಲ್ಲವನ್ನು ಉತ್ಪಾದಿಸುವುದಕ್ಕೆ ಪ್ರೋತ್ಸಾಹ ಕೊಟ್ಟು, ಇತ್ತ ಪರಿಸರ ಮತ್ತು ಜನಸಾಮಾನ್ಯರ ಆರೋಗ್ಯದ ಬಗ್ಗೆ ಖಾಳಜಿ ತೋರಿಸುಂತೆ ನಟಿಸಲಾಗುತ್ತಿದೆಯೆ? ಗೊತ್ತಿಲ್ಲ.
ನಿಜವಾಗಿ ನಿದ್ದೆಮಾಡುತ್ತಿರುವವರನ್ನ ಎಬ್ಬಿಸಬಹುದು, ನಿದ್ರೆ ಮಾಡುವಂತೆ ನಟಿಸುವವರನ್ನಲ್ಲ.


