ಅಥಣಿಯಲ್ಲಿ ಜೆ.ಎ ಪಪೂ ಕಾಲೇಜ್ ಪ್ರಾಚಾರ್ಯ ಮಹಾಲಿಂಗ ಮೇತ್ರಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ, ಅವಕಾಶ ಮತ್ತು ಗೌರವವನ್ನು ನೀಡಿದೆ ಸಂವಿಧಾನದಿಂದಾಗಿ ಸಾಮಾನ್ಯ ಪ್ರಜೆಗೂ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದು ಅಥಣಿ ಜೆ.ಎ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹಾಲಿಂಗ ಮೇತ್ರಿ ಹೇಳಿದರು.
ಅವರು ಪಟ್ಟಣದ ಖೋತ ಸಭಾ ಭವನದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯಿತಿ, ಪುರಸಭೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು. ಯುವಕರು ಸಂವಿಧಾನದ ಆಶಯಗಳನ್ನು ಅರಿತುಕೊಂಡು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಶಿಂಗೆ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಮಾತನಾಡಿ, ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಜನರಲ್ಲಿದೆ. ಯುವಕರು ಕೇವಲ ತಮ್ಮ ಹಕ್ಕುಗಳ ಬಗ್ಗೆ ಮಾತನಾಡದೆ, ಕರ್ತವ್ಯಗಳನ್ನೂ ಅರಿತುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಉಪನ್ಯಾಸಕಿ ಅರ್ಚನಾ ಪೂಜಾರಿ, ಗ್ರೇಡ್ 2 ತಹಶಿಲ್ದಾರ ಮಹಾದೇವ ಬಿರಾದಾರ, ತಾ.ಪಂ ಶಿವಾನಂದ ಕಲ್ಲಾಪೂರ,ಸ ಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜಿ, ತಾಲೂಕಾ ವೈದ್ಯಾಧಿಕಾರಿ ಬಸಗೌಡ ಕಾಗೆ, ಸಮಾಜ ಕಲ್ಯಾಣ ಇಲಾಖೆ ಕಛೇರಿ ಅಧಿಕ್ಷಕ ಸದಾಶಿವ ಮಾಂಗ, ನಿಲಯ ಪಾಲಕ ರಾಜಶೇಖರ ಹೀರೆಮನಿ, ಓಗೇಪ್ಪ ಅರಟಾಳ, ಚಿದಾನಂದ ಬಡಕಂಬಿ, ಚಂದ್ರಕಾಂತ ಕಾಂಬಳೆ, ದುಂಡಪ್ಪ ಗೂಳಪ್ಪನ್ನವರ, ಶೃತಿ ಘಟಕಾಂಬಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

