ವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ವಿದ್ಯಾರ್ಥಿಗಳಿಗೆ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಣಿ ಚನ್ನಮ್ಮನ ಚರಿತ್ರೆ ಹಾಗೂ ಅವರ ಆದರ್ಶಗಳಾದ ಸ್ವಾತಂತ್ರ‍್ಯ, ಸ್ವಾಭಿಮಾನ, ಧೈರ್ಯ ಮತ್ತು ಸಾಹಸಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ಕರೆ ನೀಡಿದರು.
ನಗರದ ಡಾ. ಫ.ಗು. ಹಳಕಟ್ಟಿ ಸ್ನಾತಕೋತ್ತರ ಕೇಂದ್ರದಲ್ಲಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀ ಸಬಲೀಕರಣಕ್ಕೆ ರಾಣಿ ಚನ್ನಮ್ಮನ ಜೀವನ ಹಾಗೂ ಹೋರಾಟದ ಇತಿಹಾಸ ಪ್ರೇರಣಾದಾಯಕವಾಗಿದ್ದು, ವಿದ್ಯಾರ್ಥಿಗಳು ಅವರ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ರಾಣಿ ಚನ್ನಮ್ಮ ಅಧ್ಯಯನ ಪೀಠವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಯೋಜಿತ ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಡಾ. ಕೆ.ಎನ್.ದೊಡ್ಡಮನಿ ಮಾತನಾಡಿ, ರಾಣಿ ಚನ್ನಮ್ಮ ಹಾಗೂ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಚರಿತ್ರೆಯ ಕುರಿತ ಸಂಶೋಧನಾ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಸ್.ಎಂ. ಗಂಗಾಧರಯ್ಯ, ಹಾಗೂ ಡಾ. ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರದ ಸಂಯೋಜಕ ಡಾ. ಚಂದ್ರಕಾಂತ ಕೋಳಿಗುಡ್ಡೆ ಹಾಗೂ ಉಪಕುಲಸಚಿವ ಡಾ. ಡಿ.ಕೆ. ಕಾಂಬಳೆ, ಸಿಂಡಿಕೇಟ್ ಸದಸ್ಯ ರಫೀ ಭಂಡಾರಿ ಸೇರಿದಂತೆ ಹಲವರಿದ್ದರು.

