ಉತ್ಸವಕ್ಕೆ ಸೀಮಿತವಾದ ಹೈದ್ರಾಬಾದ್ ಕರ್ನಾಟಕ ವಿಮೋಚನೆ | ಕಲ್ಯಾಣ ಕರ್ನಾಟಕದ ಬವಣೆಗಳಿಗೆ ಮುಕ್ತಿ ಯಾವಾಗ?
–ಆಕಾಶ್ ರೋಡಗಿ. ಶಿವೂರ
ತಾಲೂಕು: ಆಫ್ಜಲ್ಪುರ್
ಕಲಬುರ್ಗಿ ಜಿಲ್ಲೆ
ಮೊ: 9482455825
ಉದಯರಶ್ಮಿ ದಿನಪತ್ರಿಕೆ
ಒಂದು ಕಡೆ ಆಗಸ್ಟ್ 15ರಂದು ದೇಶದ ಸ್ವಾತಂತ್ರ್ಯದ ಹೆಸರಿನಲ್ಲಿ ಧ್ವಜ ಹಾರಿಸುತ್ತೇವೆ. ಮತ್ತೊಂದೆಡೆ ಸೆಪ್ಟೆಂಬರ್ 17ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ಹೆಸರಿನಲ್ಲಿ ಮತ್ತೊಮ್ಮೆ ಧ್ವಜ ಹಾರಿಸುತ್ತೇವೆ. ಆದರೆ ಪ್ರಶ್ನೆ ಮಾತ್ರ ಒಂದೇ—“ಯಾರಿಗೆ ಬಂತು, ಎಲ್ಲಿಗೆ ಬಂತು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಸ್ವಾತಂತ್ರ್ಯ?”
1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಪಡೆದರೂ, ಅಂದಿನ ಹೈದ್ರಾಬಾದ್ ಸಂಸ್ಥಾನ ಭಾರತ ಒಕ್ಕೂಟಕ್ಕೆ ತಕ್ಷಣ ಸೇರ್ಪಡೆಯಾಗಲಿಲ್ಲ. ನಿಜಾಂ ಆಡಳಿತದ ವಿರುದ್ಧ ಪ್ರಜಾಪ್ರಭುತ್ವ ಮತ್ತು ಭಾರತ ಸೇರ್ಪಡೆಗಾಗಿ ಹೋರಾಟಗಳು ನಡೆದವು. 1948ರ ಸೆಪ್ಟೆಂಬರ್‌ನಲ್ಲಿ ನಡೆದ ‘ಆಪರೇಷನ್ ಪೋಲೊ’ ನಂತರ ಹೈದ್ರಾಬಾದ್ ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಸೆಪ್ಟೆಂಬರ್ 17, 1948 ಈ ಪ್ರದೇಶದ ರಾಜಕೀಯ ವಿಮೋಚನೆಯ ಪ್ರಮುಖ ದಿನವಾಗಿ ಗುರುತಿಸಲ್ಪಟ್ಟಿದೆ.
ನಂತರ ರಾಜ್ಯ ಪುನರ್‌ರಚನೆಯ ಸಂದರ್ಭದಲ್ಲಿ ಈ ಭಾಗ ಕರ್ನಾಟಕದೊಂದಿಗೆ ಸೇರಿತು. ಆದರೆ ರಾಜಕೀಯವಾಗಿ ಒಂದಾದರೂ ಅಭಿವೃದ್ಧಿಯಲ್ಲಿ ಸಮಾನತೆ ಬರಲಿಲ್ಲ ಎಂಬ ಅಸಮಾಧಾನ ಮುಂದುವರಿಯಿತು. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂವಿಧಾನದ 371(J) ಅಡಿಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗದಲ್ಲಿ ಸ್ಥಳೀಯರಿಗೆ ವಿಶೇಷ ಅವಕಾಶಗಳು ಹಾಗೂ ಪ್ರದೇಶದ ಅಭಿವೃದ್ಧಿಗೆ ವಿಶೇಷ ವ್ಯವಸ್ಥೆ ಇದರ ಪ್ರಮುಖ ಉದ್ದೇಶಗಳಾಗಿವೆ.
ಇಂದು ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುತ್ತಿದ್ದು, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಈ ಪ್ರದೇಶದಲ್ಲಿವೆ. ಈ ಏಳು ಜಿಲ್ಲೆಗಳ ಸಮತೋಲನ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಹಿಸುತ್ತಿದೆ.
ಆದರೆ ದಶಕಗಳ ನಂತರವೂ ನೀರಾವರಿ ಕೊರತೆ, ಮಳೆಯ ಅನಿಶ್ಚಿತತೆ, ಕೃಷಿ ಸಂಕಷ್ಟ, ಕೈಗಾರಿಕಾ ಅವಕಾಶಗಳ ಕೊರತೆ, ಉದ್ಯೋಗಕ್ಕಾಗಿ ಯುವಕರ ವಲಸೆ, ಶಿಕ್ಷಣ ಮತ್ತು ಆರೋಗ್ಯ ಮೂಲಸೌಕರ್ಯದ ಅಂತರದಂತಹ ಸಮಸ್ಯೆಗಳು ಚರ್ಚೆಯಲ್ಲಿವೆ. ಪ್ರದೇಶದ ಭೌಗೋಳಿಕ ಪರಿಸ್ಥಿತಿಯೂ ಸವಾಲಾಗಿದೆ, ಕಾರಣ ಪ್ರಮುಖ ಒಣ ಪ್ರದೇಶಗಳಲ್ಲಿ ಒಂದಾಗಿರುವದು.
ಹೀಗಾಗಿ ವಿಮೋಚನಾ ದಿನ ಕೇವಲ ಧ್ವಜಾರೋಹಣ ಮತ್ತು ಭಾಷಣಕ್ಕೆ ಸೀಮಿತವಾಗಬಾರದು. 371(J) ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ (KKRDB) ಅನುದಾನದ ಪ್ರತಿಯೊಂದು ರೂಪಾಯಿ ಎಲ್ಲಿ ಖರ್ಚಾಯಿತು, ಯಾವ ಕಾಮಗಾರಿ ಪೂರ್ಣಗೊಂಡಿತು, ಅದರ ಫಲ ಎಷ್ಟು ಜನರಿಗೆ ತಲುಪಿತು ಎಂಬುದನ್ನು ಸಾರ್ವಜನಿಕವಾಗಿ ಲೆಕ್ಕ ನೀಡುವ ವ್ಯವಸ್ಥೆ ಬೇಕಾಗಿದೆ.
ಸರ್ಕಾರ ಮೊದಲು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕೊನೆಯ ರೈತನ ಹೊಲಕ್ಕೂ ನೀರು ತಲುಪಿಸಬೇಕು. ಕೆರೆ–ಕಾಲುವೆಗಳ ಪುನಶ್ಚೇತನ, ಕೃಷಿ ಉತ್ಪನ್ನಗಳಿಗೆ ಸಂಸ್ಕರಣಾ ಘಟಕಗಳು, ಶೀತಗೃಹ ಮತ್ತು ಮಾರುಕಟ್ಟೆ ವ್ಯವಸ್ಥೆ ನಿರ್ಮಿಸಬೇಕು. ಸರ್ಕಾರಿ ಶಾಲೆ–ಕಾಲೇಜುಗಳಿಗೆ ಶಿಕ್ಷಕರು, ಪ್ರಯೋಗಾಲಯ, ಹಾಸ್ಟೆಲ್ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ತಾಲೂಕು ಆಸ್ಪತ್ರೆಗಳನ್ನು ತಜ್ಞ ವೈದ್ಯರು ಮತ್ತು ಅಗತ್ಯ ಚಿಕಿತ್ಸಾ ಸೌಲಭ್ಯಗಳೊಂದಿಗೆ ಬಲಪಡಿಸಬೇಕು.
ಯುವಕರಿಗೆ ಸರ್ಕಾರಿ ಉದ್ಯೋಗದ ಜೊತೆಗೆ ಸ್ಥಳೀಯವಾಗಿ ಖಾಸಗಿ ಕೈಗಾರಿಕೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME), ಕೃಷಿ ಆಧಾರಿತ ಉದ್ಯಮ ಮತ್ತು ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಸೃಷ್ಟಿಸಬೇಕು. ಗ್ರಾಮೀಣ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು. ಅಭಿವೃದ್ಧಿಯ ಫಲ ರಾಜಧಾನಿ ಅಥವಾ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಸೀಮಿತವಾಗದೆ ಕಟ್ಟಕಡೆಯ ಹಳ್ಳಿಗೂ ತಲುಪಬೇಕು.
1948ರಲ್ಲಿ ನಿಜಾಂ ಆಡಳಿತದಿಂದ ರಾಜಕೀಯ ವಿಮೋಚನೆ ದೊರೆಯಿತು. ಈಗ ಹಿಂದುಳಿತ, ನಿರುದ್ಯೋಗ, ನೀರಿನ ಕೊರತೆ, ಶಿಕ್ಷಣದ ಅಂತರ ಮತ್ತು ಅಭಿವೃದ್ಧಿಯ ಅಸಮಾನತೆಯಿಂದ ಜನರಿಗೆ ವಿಮೋಚನೆ ದೊರೆಯಬೇಕಿದೆ.
ಆದ್ದರಿಂದ ಈ ಸೆಪ್ಟೆಂಬರ್ 17ರಂದು ಧ್ವಜ ಹಾರಿಸುವಾಗ ಮತ್ತೊಂದು ಪ್ರಶ್ನೆಯೂ ಮೊಳಗಲಿ—
“ಒಮ್ಮೆ ಸ್ವಾತಂತ್ರ್ಯದ ಹೆಸರಿನಲ್ಲಿ, ಮತ್ತೊಮ್ಮೆ ವಿಮೋಚನೆಯ ಹೆಸರಿನಲ್ಲಿ ಧ್ವಜ ಹಾರಿಸುವ ನಾವು—ಯಾರಿಗೆ ಬಂತು, ಎಲ್ಲಿಗೆ ಬಂತು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಸ್ವಾತಂತ್ರ್ಯ?”
ನಿಜಾಂನಿಂದ ವಿಮೋಚನೆ ಇತಿಹಾಸದ ಅಧ್ಯಾಯ;
ಹಿಂದುಳಿತದಿಂದ ವಿಮೋಚನೆ ಇಂದಿನ ಜವಾಬ್ದಾರಿ.
ವಿಮೋಚನಾ ದಿನದ ಸಂಕಲ್ಪ: ಘೋಷಣೆಗಳಿಂದ ಅಭಿವೃದ್ಧಿಯತ್ತ ಸಾಗಲಿ ಕಲ್ಯಾಣ ಕರ್ನಾಟಕ ಎನ್ನುವದು ನಮ್ಮ ಆಶಯ..


