ವೃಕ್ಷಥಾನ್ ಹೆರಿಟೇಜ್ ರನ್‌ಗೆ ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆಯಿಂದ ವೃಕ್ಷಥಾನ್ ಗೆ ಅಧಿಕೃತ ಪ್ರಮಾಣಪತ್ರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಪ್ರತಿ ವರ್ಷ ಆಯೋಜಿಸುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ ಗೆ ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆ (Association of International Marathons and Distance Races) ಯಿಂದ ಮಾನ್ಯತೆ ಲಭಿಸಿದೆ.
ವಿಶ್ವ ಅಥ್ಲೇಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆ (AIMS) ವಿಶ್ವಾದ್ಯಂತ ನಡೆಯುವ ಮ್ಯಾರಥಾನಗಳನ್ನು ನಿಗದಿತ ಮಾನದಂಡಗಳೊಂದಿಗೆ ಪರಿಶೀಲನೆ ನಡೆಸುತ್ತದೆ. ಅಲ್ಲದೇ, ಮ್ಯಾರಥಾನಗಳ ಆಯೋಜನೆಯಲ್ಲಿ ಪಾಲಿಸಲಾಗುವ ಪಾರದರ್ಶಕತೆ, ಓಟಗಳ ನಿಖರವಾದ ದೂರ ಹಾಗೂ ಉದ್ದೇಶಗಳನ್ನು ಪರಿಗಣಿಸಿ ಪ್ರಮಾಣ ಪತ್ರ ನೀಡುತ್ತದೆ.
ಅಂತಾರಾಷ್ಟ್ರೀಯ ಮ್ಯಾರಥಾನ್ ಆಯೋಜಕರ ಸಂಘಟನೆ ಅಧಿಕಾರಿಗಳು ನಗರಕ್ಕೆ ಇತ್ತೀಚೆಗೆ ಭೇಟಿ ನೀಡಿ, ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಆಯೋಜಿಸಲಾದ 21.1 ಕಿ.ಮೀ. ಹಾಫ್ ಮ್ಯಾರಥಾನ್, 10 ಕಿ.ಮೀ. ಹಾಗೂ 5 ಕಿ.ಮೀ. ವಿಭಾಗಗಳ ಮಾರ್ಗ ಹಾಗೂ ದೂರವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಈ ಪ್ರಮಾಣ ಪತ್ರ ನೀಡಿದ್ದಾರೆ.
ಈ ಮಾನ್ಯತೆ ಲಭಿಸಿರುವುದರಿಂದ ಐತಿಹಾಸಿಕ ವಿಜಯಪುರದಲ್ಲಿ ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್ ಗೆ ಜಾಗತಿಕವಾಗಿ ಮನ್ನಣೆ ಸಿಕ್ಕಂತಾಗಿದೆ. ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟಗಾರರು ವಿಜಯಪುರದಲ್ಲಿ ನಡೆಯುವ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಪ್ರೊತ್ಸಾಹ ಸಿಗಲಿದೆ. ವಿಜಯಪುರ ನಗರದ ಪ್ರವಾಸೋದ್ಯಮ, ಪ್ರಾಚೀನ ಸ್ಮಾರಕಗಳ ರಕ್ಷಣೆ, ವೃಕ್ಷ, ಶಿಕ್ಷಣ, ಆರೋಗ್ಯದ ಯಶೋಗಾಥೆ ಪ್ರಪಂಚಕ್ಕೆ ತಿಳಿಯಲಿದೆ.
ಈ ಓಟಕ್ಕೆ ದೊರೆತ ಮಾನ್ಯತೆಯಿಂದಾಗಿ ವಿಜಯಪುರ ನಗರ ಜಾಗತಿಕ ಮಟ್ಟದಲ್ಲಿ ಮ್ಯಾರಥಾನ್ ಕ್ರೀಡೆಯಿಂದ ಪ್ರತಿ ವರ್ಷ ಗುರುತಿಸಲು ಸಾಧ್ಯವಾಗುತ್ತದೆ. ಕೋಟಿವೃಕ್ಷ ಅಭಿಯಾನ ವೃಕ್ಷಥಾನ್ ರನ್ ಕಮಿಟಿ, ವಿಜಯಪುರ ಸೈಕ್ಲಿಂಗ್ ಗ್ರುಪ್ ಸೇರಿದಂತೆ ವಿವಿಧ ಪರಿಸರ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.

