ಆಲಮೇಲದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮೇಜರ್ ವಿಜಯಕುಮಾರ್ ಕಲಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪೂರ್ವ ಪ್ರಾಥಮಿಕ ಹಾಗೂ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಧಕರ ಪರಿಚಯ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾರತೀಯ ಸೇನೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಪಟ್ಟಣದ ಮೇಜರ್ ವಿಜಯಕುಮಾರ್ ರಾಜಶೇಖರ ಕಲಶೆಟ್ಟಿ ಅವರನ್ನು ಗೌರವಿಸಲಾಯಿತು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಶೆಟ್ಟಿ ಅವರು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿದ್ದು ಬಾಲಭಾರತಿ ಶಾಲೆಯಿಂದ. ಇಲ್ಲಿಯ ಶಿಕ್ಷಣ ಪಧ್ಧತಿ ನನ್ನ ಸಾಧನೆಗೆ ಮೈಲಿಗಲ್ಲು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಗಳಿಗೆ ಉತ್ತಮ ಗುಣಮಟ್ಟ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿರುವುದು ನಮ್ಮಂತಹ ನೂರಾರು ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕೈಗನ್ನಡಿ ಎಂದರು. ಮಕ್ಕಳು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಯಾರಿ ಮಾಡಬೇಕು. ಅದರ ಜೊತೆಗೆ ಕ್ರೀಡಾಟಗಳಲ್ಲಿ ನಿಯಮಿತವಾಗಿ ಪಾಲ್ಗೊಂಡು ಸದೃಢವಾದ ದೇಹ ಹಾಗೂ ಮನಸ್ಸು ತಯಾರಿಮಾಡಿಕೊಳ್ಳಬೇಕು ಅಂದಾಗ ಮಾತ್ರ ಎನ್.ಡಿ.ಎ.ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಲೆಫ್ಟಿನೆಂಟ್, ಕ್ಯಾಪ್ಟನ್ ಹಾಗೂ ಮೇಜರ್ ದಂತಹ ಮಹತ್ತರವಾದ ಹುದ್ದೆಗಳನ್ನು ಪಡೆದು ದೇಶ ಸೇವೆ ಮಾಡುವ ಸೌಭಾಗ್ಯ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಈ ವೇಳೆ ಬಸವಲಿಂಗ ಶರಣರು, ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ, ಪಾಲಕ ಪ್ರತಿನಿಧಿ ರಾಜಶೇಖರ ಕಲಶೆಟ್ಟಿ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಐಶ್ವರ್ಯ ಬೇಪಾರಿ, ಅಂಜಲಿ ಕನ್ನೊಳ್ಳಿ ಉಪಸ್ಥಿತರಿದ್ದರು.

