ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ೨೧ ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ನಿರ್ಧಾರ ಪ್ರಕಟಿಸಿರುವ ಕೇಂದ್ರ ಗೃಹ ಸಚಿವ ಅಮೀತ್ ಷಹಾ ಅವರ ಹೇಳಿಕೆ ಸ್ವಾಗತಾರ್ಹ, ಈ ಏಕರೂಪ ನಾಗರಿಕ ಸಂಹಿತೆ ಏಕತೆಯನ್ನು ಬೆಸೆಯುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ೨೦೨೯ರೊಳಗೆ ದೇಶದ ೨೧ ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ವಿಷಯವನ್ನು ಮಂಡಿಸಿರುವ ಕೇಂದ್ರ ಗೃಹ ಸಚಿವರ ಹೇಳಿಕೆ ಅತ್ಯಂತ ಸಂತೋಷ ತರಿಸಿದೆ, ದೇಶವನ್ನು ಏಕತೆಯ ಭಾವದೊಂದಿಗೆ ಬೆಸೆಯುವ ಈ ನೀತಿ ನಮ್ಮ ರಾಜ್ಯ ಸರ್ಕಾರ ಸಹ ಜಾರಿಗೊಳಿಸಬೇಕು, ಇಲ್ಲವಾದರೆ ಮುಂದೆ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುವುದು ನಿಶ್ಚಿತ, ಆಗಂತೂ ಈ ಏಕರೂಪ ನಾಗರಿಕರ ಸಂಹಿತೆ ಜಾರಿಯಾಗುವುದು ನಿಶ್ಚಿತ ಎಂದು ಜಿಗಜಿಣಗಿ ಹೇಳಿದ್ದಾರೆ.
ದೇಶದ ಪ್ರತಿಯೊಬ್ಬ ನಾಗರಿಕನಿಗೂ ಒಂದೇ ರೀತಿಯ ಕಾನೂನು ಅನ್ವಯವಾಗಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಮಹತ್ವದ ಹೆಜ್ಜೆಯಾಗಲಿದೆ. ಮಹಿಳೆಯರ ಹಕ್ಕುಗಳು, ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಜೊತೆಗೆ ದೇಶದಲ್ಲಿ ಏಕತೆ ಮತ್ತು ಸಮಾನತೆಯ ಮನೋಭಾವವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಹಿತದೃಷ್ಟಿಯಿಂದ ಕೈಗೊಳ್ಳುತ್ತಿರುವ ಸ್ವಾಗತಾರ್ಹ, ಇದಕ್ಕೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಯಿಂದ ಬೆಂಬಲಿಸಬೇಕು, ಬಿಜೆಪಿ ಸರ್ಕಾರಕ್ಕೆ ಬಲ ನೀಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

