ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಯುವ ಸಂಸತ್ತು ಸಭೆಗೆ ಚಾಲನೆ ನೀಡಿದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿ ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವುದಲ್ಲ. ಪ್ರಜಾಪ್ರಭುತ್ವ ಎಂದರೆ ಅದೊಂದು ಜವಾಬ್ದಾರಿ. ಸಂವಿಧಾನದ ಆಶಯದಂತೆ ಪರಸ್ಪರ ಚರ್ಚೆ, ಸಮಾಲೋಚನೆ, ಸಹಕಾರ ಹಾಗೂ ಸಮಾನತೆಯಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು, ಎಲ್ಲರನ್ನೂ ಭ್ರಾತೃತ್ವ ಭಾವದಿಂದ ಕೊಂಡೊಯ್ಯುವುದೇ ಪ್ರಜಾಪ್ರಭುತ್ವದ ಸೌಂದರ್ಯ ಅಡಗಿದೆ ಎಂದು ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಯುವ ಸಂಸತ್ತು ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಹಕ್ಕಿನ ಬಗ್ಗೆ ಮಾತನಾಡುತ್ತಾರೆ. ಹಕ್ಕುಗಳಿಗೆ ಹೋರಾಟ ಮಾಡುತ್ತಾರೆ. ಆದರೆ ಹಕ್ಕಿನ ಜೊತೆಗೆ ಕರ್ತವ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಹಕ್ಕಿನ ಜೊತೆಗೆ ಜವಾಬ್ದಾರಿ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದರು.
೨೦೦೭ ರಲ್ಲಿ ವಿಶ್ವಸಂಸ್ಥೆಯಲ್ಲಿ ಸೆ. ೧೫ ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಚರಿಸಬೇಕು ಎಂದು ಠರಾವು ಪಾಸು ಮಾಡಿತು. ೨೦೦೮ ರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು.
ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಈ ದೇಶದಲ್ಲಿ ಸರ್ವಾಂತರ್ಯಾಮಿಯಾಗಿದೆ. ಅದು ಎಲ್ಲ ಕಡೆಯೂ ಇದೆ. ಆದರೆ ಕಾನೂನು ಉಲ್ಲಂಘನೆಯಾದಾಗ ಸಂವಿಧಾನದ ಮಹತ್ವ ಅರಿವಿಗೆ ಬರುತ್ತದೆ. ಹಾಗಾಗಿ ಈ ದೇಶದಲ್ಲಿ ಯಾವುದೂ ಸುಪ್ರಿಂ ಅಲ್ಲ. ಸಂವಿಧಾನ ಮಾತ್ರವೇ ಸುಪ್ರಿಂ ಆಗಿದೆ ಎಂದು ವ್ಯಾಖ್ಯಾನಿಸಿದರು.
ಬೇರೆ ಬೇರೆ ರಾಷ್ಟ್ರಗಳಿಗಿಂತ ನಮ್ಮ ಸಂವಿಧಾನ ವಿಭಿನ್ನವಾಗಿದೆ. ದೇಶದಲ್ಲಿ ಏನೇ ಚಟುವಟಿಕೆ ನಡೆದರೂ, ನಮಗರಿವಿಲ್ಲದಂತೆ ನಡೆಯುತ್ತಲೇ ಇರುತ್ತವೆ. ಆದರೆ ಸಂವಿಧಾನದ ಆಶಯಕ್ಕೆ ಧಕ್ಕೆಯಾದಾಗ ಸಂವಿಧಾನದ ಮಹತ್ವ ಪ್ರತಿಯೊಬ್ಬರ ಅರಿವಿಗೆ ಬರುತ್ತದೆ. ಹಾಗಾಗಿ ಸಂವಿಧಾನ ಎಲ್ಲೆಡೆಯೂ ಹಾಸುಹೊಕ್ಕಾಗಿದೆ. ಸಂವಿಧಾನ ಸರ್ವಂತಾರ್ಯಾಮಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಓಂಕಾರ ಕಾಕಡೆ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಬ್ಬ ಆಚರಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎನ್ನುವುದನ್ನು ಸಿಂಹಾವಲೋಕನ ಮಾಡಿಕೊಳ್ಳುವುದೇ ಈ ಆಚರಣೆಯ ಹಿಂದಿರುವ ಗುಟ್ಟು ಎಂದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ಕೋಟ್ಯಂತರ ಜನರನ್ನು ಒಂದೇ ಸೂರಿನಡಿ ಮುನ್ನಡೆಸುತ್ತಿರುವ ನಮ್ಮ ಸಂವಿಧಾನದ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಈ ದಿನದಂದು ಸ್ಮರಿಸಬೇಕು. ಭಿನ್ನಾಭಿಪ್ರಾಯ ಸಹಿಸುವ, ಸಮಾಜದ ಅಹಿಷ್ಣುತೆಯನ್ನು ಹೇಳುವುದೇ ಸಂವಿಧಾನವಾಗಿದೆ ಎಂದರು.
ಭಾರತದ ಅಮೃತಮಹೋತ್ಸವ ಅಂಗವಾಗಿ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ವಿವಿಯನ್ನು ಪ್ರತಿನಿಧಿಸಿ ಪ್ರಧಾನಿ ಎದುರು ಭಾಷಣ ಮಾಡಿ ಮಹತ್ಸಾಧನೆ ಮಾಡಿದ ಚಡಚಣದ ಸುಪ್ರಿಯಾ ಬನಸೋಡೆ ಈ ಸಂದರ್ಭದಲ್ಲಿ ಮಾತನಾಡಿದರು.
ವೇದಿಕೆ ಮೇಲೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಸಂತ ಹೊನಮೊಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳಾದ ರಿಷಿ ಆನಂದ, ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಜೆ.ಬಿರಾದಾರ, ಡೈಟ್ ಪ್ರಾಚಾರ್ಯರಾದ ಎಸ್.ಎಸ್. ಮುಜಾವರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆ. ಎ. ಉಪ್ಪಾರ, ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಬಿ.ಆರ್. ಬನಸೋಡೆ, ವಿದ್ಯಾವತಿ ಅಂಕಲಗಿ, ಅಡಿವೆಪ್ಪ ಸಾಲಗಲ್, ರಮೇಶ ಆಸಂಗಿ, ಅಶೋಕ ಚಲವಾದಿ, ಚನ್ನು ಕಟ್ಟಿಮನಿ, ಸಿದ್ದು ರಾಯಣ್ಣವರ, ವಿನಾಯಕ ಗುಣಸಾಗರ, ಮಲ್ಲು ಬಿದರಿ, ಭೀಮರಾಯ ಜಿಗಜಿಣಗಿ, ಅಭಿಷೇಕ ಚಕ್ರವರ್ತಿ, ಮಹಾಂತೇಶ ಸಾಸಬಾಳ, ಗಿರೀಶ ಕುಲಕರ್ಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋತದಾರ ಸಂವಿಧಾನ ಪೀಠಿಕೆ ವಾಚಿಸಿ, ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣಧಿಕಾರಿಗಳಾದ ಎಂ.ಜೆ. ಇಂಡಿ ಅವರು ವಂದಿಸಿದರು.

“ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅಭಿವೃದ್ಧಿ ಶೀಲ ರಾಷ್ಟ್ರವಾಗಿ ಮುಂದುವರಿದಿದೆ. ಹಾಗಾಗಿ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಇಂತಹ ವ್ಯವಸ್ಥೆ ಹೊಂದಿರುವ ನಮ್ಮ ರಾಷ್ಟ್ರದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಕಷ್ಟು ಅರ್ಥ ಮಾಡಿಕೊಳ್ಳಬೇಕಿದೆ.”
– ಲಕ್ಷ್ಮಣ ನಿಂಬರಗಿ
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

