ಎಳೆಯರು ನಾವು ಗೆಳೆಯರು ಸಂಘದಿಂದ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮ
ಮುದ್ದೇಬಿಹಾಳ: ಕಷ್ಟದ ದಿನಗಳನ್ನು ಯಾರೂ ಮರೆಯಬಾರದು. ಪಾಲಕರು ಎಷ್ಟೇ ಅನುಕೂಲಸ್ಥರಿದ್ದರೂ ನಿಮ್ಮ ಮಕ್ಕಳಿಗೆ ನಿಮ್ಮ ಮನೆತನ ನೋವು, ಹಸಿವಿನ ಜೊತೆಗೆ ಬಡತನದ ಪರಿಚಯ ಮಾಡಿ, ಅಂದಾಗ ಮಾತ್ರ ನಿಮ್ಮ ಮಕ್ಕಳು ಹಾಳಾಗದೇ ಜಗತ್ತನ್ನೇ ಬೆಳಗುವ, ರಕ್ಷಣೆ ಮಾಡುವ ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ಶಿರಹಟ್ಟಿ ಭಾವೈಕ್ಯತಾ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ಸನ್ ೧೯೯೩ ನೇ ಸಾಲಿನಲ್ಲಿ ಪಟ್ಟಣದ ಕೆಬಿಎಂಪಿಎಸ್, ವಿಬಿಸಿ, ಮತ್ತು ಎಸ್‌ಎಸ್‌ಎಂ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಕಲಿತ ವಿದ್ಯಾರ್ಥಿಗಳ ಎಳೆಯರು ನಾವು ಗೆಳೆಯರು ಸಂಘದ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹಸಿವಿನ ಪರಿಚಯ ವಾಗುತ್ತಿತ್ತು. ತಂದೆ ತಾಯಿಗಳು ಇದ್ದ ಬಟ್ಟೆ ಹರೆಯುವ ತನಕ ಮತ್ತೊಂದು ಬಟ್ಟೆಯನ್ನು ಕೊಡಿಸುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇರುತ್ತಿರಲಿಲ್ಲ. ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರುತ್ತಿದ್ದರು. ಹಾಗಾಗಿ ಅವರಲ್ಲಿ ದೇಹಕ್ಕೆ ವ್ಯಾಯಾಮ ಸಿಕ್ಕು ಕಲಿಯುವ ಹಂಬಲ ಹೆಚ್ಚಾಗಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಿದ್ದರು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅದೆಷ್ಟೋ ತಂದೆ ತಾಯಿಗಳು ನಾನು ಕಷ್ಟಪಟ್ಟಿದ್ದು ಸಾಕು ನಮ್ಮ ಮಕ್ಕಳು ಕಷ್ಟಪಡಬಾರದೆಂದು ಕಷ್ಟದ ಪರಿಚಯವನ್ನು ತಮ್ಮ ಮಕ್ಕಳಿಗೆ ಮಾಡಿಸುತ್ತಿಲ್ಲ. ಇದು ದೊಡ್ಡ ತಪ್ಪು. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ದುಶ್ಚಟಗಳಿಗೆ ಅಂಟಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯವನ್ನು ಎಲ್ಲ ಪಾಲಕರು ಅರಿತುಕೊಳ್ಳಬೇಕು ಎಂದರು.
ಪಾವನ ಸಾನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಮಾತನಾಡಿದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸನ್ಮಾನಿತರ ಪರವಾಗಿ ನಿವೃತ್ತ ಶಿಕ್ಷಕ, ಸಾಹಿತಿ ಎಸ್.ಬಿ.ಕನ್ನೂರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾಜಪಾ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ನಿವೃತ್ತ ಡಿವಾಯ್‌ಎಸ್ಪಿ ಎಸ್.ಎಸ್.ಹುಲ್ಲೂರ ಮಾತನಾಡಿದರು. ಇಟಗಿಯ ಭೂಕೈಲಾಸ ಹಿರೇಮಠ ಮೇಲ್ಗದ್ದುಗೆಯ ಗುರುಶಾಂತವೀರ ಶಿವಾಚಾರ್ಯರು, ಮಸೀಬಿನಾಳದ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಮಾಜ ಸೇವಕರಾದ ಸಿ.ಬಿ.ಅಸ್ಕಿ ಮತ್ತು ಮಲ್ಲಿಕಾರ್ಜುನ ಮದರಿ, ಗಣ್ಯ ವರ್ತಕ ಬಿ.ಸಿ.ಮೋಟಗಿ, ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಬಳಗದ ಅಧ್ಯಕ್ಷ ಪ್ರಕಾಶ ವೇದಿಕೆ ಮೇಲಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ನಿವೃತ್ತ ಯೋಧ ಎಸ್.ಸಿ.ಹಿರೇಮಠ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ವಿದ್ಯಾರ್ಥಿ ಗೋಪಿಕಾ ರಾಯಚೂರ ಭರತನಾಟ್ಯದ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಬಳಗದ ರಾಜು ನಲವಡೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾಮರಾಜ ಬಿರಾದಾರ ವಂದನೆಗಳನ್ನು ಸಲ್ಲಿಸಿದರು. ಶಿಕ್ಷಕ ಟಿ.ಡಿ.ಲಮಾಣಿ ನಿರ್ವಹಿಸಿದರು.