ವಿಜಯಪುರದಲ್ಲಿ ‘ಅಪ್ಪ ಫೌಂಡೇಶನ್’ ವತಿಯಿಂದ ಶಾಲಾ ಮಕ್ಕಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಕಲಾವಿದ ಶ್ರೀಶೈಲ ಹೂಗಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ‘ಅಪ್ಪ ಫೌಂಡೇಶನ್’ ವತಿಯಿಂದ ಶಾಲಾ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಚಿತ್ರಕಲಾ ಸ್ಪರ್ಧೆಯು ಯಶಸ್ವಿಯಾಗಿ ಜರುಗಿತು.
ಈ ಸ್ಪರ್ಧೆಯನ್ನು ಪ್ರಮುಖರಾದ ಆನಂದ ಝಂಡೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಕಲಾವಿದ ಶ್ರೀಶೈಲ ಹೂಗಾರ ಅವರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿವೆ. ಹಬ್ಬದ ದಿನಗಳಲ್ಲಿ ಇಂತಹ ಸೃಜನಶೀಲ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ತಮ್ಮ ಕುಂಚದ ಮೂಲಕ ಆಕರ್ಷಕ ಚಿತ್ರಗಳನ್ನು ಬಿಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪ್ಪ ಫೌಂಡೇಶನ್ ಅಧ್ಯಕ್ಷ ಎಸ್. ಟಿ. ಮಲಗೊಂಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಸದಸ್ಯರುಗಳಾದ ಬಿ. ಪಿ. ಬಿರಾದಾರ, ಸಿದ್ದಣ್ಣ ಚಿಂಚೋಳಿ, ಗೌರೀಶ್ ಮಲಗೊಂಡ, ಪ್ರಜ್ವಲ್ ಬಿರಾದಾರ ಉಪಸ್ಥಿತರಿದ್ದರು.
ಸ್ಪರ್ಧೆಯ ತೀರ್ಪುಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಚಿತ್ರಕಲಾ ಶಿಕ್ಷಕರುಗಳಾದ ಶಿವಾನಂದ ಅಥಣಿ, ಎಸ್. ವಿ. ಕಾಂಬ್ಳೆ, ಮದನ ವಗ್ಯಾನವರ, ಕಮಲೇಶ ಭಜಂತ್ರಿ ಹಾಗೂ ಸಲೀಮ್ ವಾಲಿಕಾರ ಅವರು ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ನೂರಾರು ಪಾಲಕರು ಉಪಸ್ಥಿತರಿದ್ದರು.
ವಿಜೇತರ ಘೋಷಣೆ ಮತ್ತು ಚಿತ್ರಕಲಾ ಪ್ರದರ್ಶನ: ಸ್ಪರ್ಧೆಯ ಫಲಿತಾಂಶ ಹಾಗೂ ವಿಜೇತರ ಹೆಸರುಗಳನ್ನು ಸೆ.20 ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು. ಅಂದು ಸ್ಪರ್ಧೆಯಲ್ಲಿ ಮಕ್ಕಳು ರಚಿಸಿದ ಎಲ್ಲಾ ಆಕರ್ಷಕ ಚಿತ್ರಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಸಾರ್ವಜನಿಕರು, ಕಲಾಭಿಮಾನಿಗಳು ಹಾಗೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರದರ್ಶನವನ್ನು ವೀಕ್ಷಿಸಿ, ಪುಟ್ಟ ಮಕ್ಕಳ ಸೃಜನಶೀಲತೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೆಂದು ಅಪ್ಪ ಫೌಂಡೇಶನ್ ಪದಾಧಿಕಾರಿಗಳು ವಿನಂತಿಸಿದ್ದಾರೆ.

