ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾತ್ರಾಳ ಗ್ರಾಮಸ್ಥರಿಗೆ ನೀರು ಸಿಕ್ಕ ಮೇಲೆ ಅವರ ಬದುಕೇ ಬದಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಬಬಲೇಶ್ವರ ತಾಲೂಕಿನ ಕಾತ್ರಾಳದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆ ಮತ್ತು ಮಂಗಲ ಭವನ ಉದ್ಘಾಟನೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರಾವರಿ ಯೋಜನೆ ಸಾಕಾರಗೊಂಡಿದ್ದರಿಂದ ರೈತರ ಜೀವನ ಮಟ್ಟ ಸುಧಾರಿಸಿದ್ದು, ಈ ಭಾಗದ ರೈತರು ಈಗ 35 ಸಾವಿರ ಟನ್ ಕಬ್ಬು ಬೆಳೆಯುವಂತಾಗಿದೆ. ಸ್ಥಳೀಯ ಕೆರೆಗೆ ಸಂಪೂರ್ಣ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮದ ಕಲ್ಯಾಣ ಮಂಟಪಕ್ಕೆ ಒಟ್ಟು ರೂ. 35 ಲಕ್ಷ ಅನುದಾನ ನೀಡಲಾಗಿದೆ. ಇಲ್ಲಿನ ಹೈಸ್ಕೂಲಿನ ಜಾಗದಲ್ಲಿ ಟೊಯೋಟಾ ಕಂಪನಿಯವರು ಸಿ.ಎಸ್.ಆರ್ ಅನುದಾನದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಿದ್ದಾರೆ. ಅಲ್ಲದೇ, ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆಟಿಕೆ ಸಲಕರಣೆಗಳನ್ನು ಕೂಡ ನೀಡಲಿದ್ದಾರೆ. ಗ್ರಾಮದ ರಸ್ತೆಯನ್ನು ಪ್ರಗತಿ ಪಥ ಯೋಜನೆಯಲ್ಲಿ ಸುಧಾರಿಸಲಾಗುವುದು. ಸರಕಾರಿ ಆಸ್ಪತ್ರೆ ಆರಂಭಿಸಲು ಕೇಂದ್ರ ಸರಕಾರದ ಮಾರ್ಗ ಸೂಚಿಯಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಕ್ಷೇತ್ರದಲ್ಲಿ ಸಾವಿರಾರು ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ. ಮುಂದೆ ತಾವೆಲ್ಲ ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ಬೇಡಿಕೆ ಇಟ್ಟರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಚಿವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಪ್ಪುಗೌಡ ಪಾಟೀಲ, ಮಲ್ಲು ದಳವಾಯಿ, ವಿಠ್ಠಲ ಪಡಸಲಗಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಕಲ್ಲಪ್ಪಗೌಡ ಬಿರಾದಾರ, ರಾಮಲಿಂಗ ಕೊಕಟನೂರ, ಗುರುಬಸಪ್ಪ ತೆವರಟ್ಟಿ, ಸಂಗು ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಒಡೆಯರ ಸ್ವಾಗತಿಸಿದರು. ಬಾಳೇಶ ಪಡಸಲಗಿ ಪ್ರಾಸ್ತಾವಿಕ ಮಾತನಾಡಿದರು.

