ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಬಳವಾಡ ಗ್ರಾಮದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಶ್ರೀ ಅಪ್ಪಯ್ಯ ಸ್ವಾಮಿಯ ಜಾತ್ರಾ ಮಹೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ಜರುಗಿತು.
ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ರಾಜ್ಯದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಅಪ್ಪಯ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತ ಶ್ರೀ ಅಪ್ಪಯ್ಯ ಸ್ವಾಮಿಯ ಮಠದ ಆಶ್ರಯದಲ್ಲಿ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಜೀವನ ದರ್ಶನ ಕುರಿತ ಪ್ರವಚನ ಕಾರ್ಯಕ್ರಮವನ್ನು ಡಾ. ವಿವೇಕಾನಂದ ಮಹಾಸ್ವಾಮಿಗಳು ನಡೆಸಿಕೊಟ್ಟರು. ಇದರೊಂದಿಗೆ ಬುತ್ತಿ ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರಾವಣ ಮಾಸದ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಶ್ರೀ ಅಪ್ಪಯ್ಯ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಡೊಳ್ಳು, ನಗಾರಿ, ಕರಡಿ ಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳ ನಾದದೊಂದಿಗೆ ಪಲ್ಲಕ್ಕಿ ಮೆರವಣಿಗೆ ಸಾಗಿದಾಗ ಭಕ್ತರು ಭಕ್ತಿಪರವಶರಾದರು. ಮಹಿಳೆಯರು ಕುಂಭಗಳನ್ನು ಹೊತ್ತು ಕುಂಭಮೇಳದಲ್ಲಿ ಪಾಲ್ಗೊಂಡಿದ್ದು ಜಾತ್ರೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು. ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಜಾತ್ರೆಯಲ್ಲಿ ರಾಚೋಟೇಶ್ವರ ಶ್ರೀಗಳು, ಮುರುಘೇಂದ್ರ ಸ್ವಾಮಿಗಳು, ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು, ಭರತನೂರು ಹಾಗೂ ಶ್ರೀ ಅಪ್ಪಯ್ಯ ಸ್ವಾಮಿ ಮಠದ ಭಕ್ತರು ಗ್ರಾಮಸ್ಥರು ಮಹಿಳೆಯರು ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
“ಬಳವಾಡದ ಶ್ರೀ ಅಪ್ಪಯ್ಯ ಸ್ವಾಮಿಯ ಮಠವು ಈ ಭಾಗದ ಜನರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಶತಮಾನಗಳ ಭಕ್ತಿ ಪರಂಪರೆಯನ್ನು ಮುಂದುವರಿಸಿಕೊಂಡು ಮಠವು ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜದಲ್ಲಿ ಸಂಸ್ಕಾರ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.”
– ಚಿದಾನಂದ ಲಕ್ಷ್ಮಣ ಸವದಿ
ಯುವ ನಾಯಕರು, ಅಥಣಿ

