ಮುದ್ದೇಬಿಹಾಳ ಬಂದ್ ಯಶಸ್ವಿ | ಶಾಸಕ ನಾಡಗೌಡರಿಗೆ ಮಾಜಿ ಶಾಸಕ ನಡಹಳ್ಳಿ ಟಾಂಗ್
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರೈತರ ಸಂಕಷ್ಟದ ಸಮಯದಲ್ಲೂ ನಾಟಕ ಮಾಡುವುದನ್ನು ನಿಲ್ಲಿಸಿಲ್ಲ. ಜನರು ಈಗ ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾರೆ. ರೈತರ ಪರವಾಗಿ ಸರ್ಕಾರದ ಮೇಲೆ ಒತ್ತಡ ತರುವ ಬದಲು ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸುವುದು ಸರಿಯಲ್ಲ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಶಾಸಕ ಸಿ.ಎಸ್.ನಾಡಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಆಗ್ರಹಿಸಿ ನಡೆದ ಪಟ್ಟಣ ಬಂದ್ ಹಿನ್ನೆಲೆ ಅಂಗಡಿ–ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲಿಸಿದ ವ್ಯಾಪಾರಸ್ಥರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.
ನಾಡಗೌಡರೆ ಮೂವತ್ತು ವರ್ಷಗಳಿಂದ ನಾಟಕ ಮಾಡುತ್ತಿದ್ದೀರಿ. ಇನ್ನೂ ನಿಮ್ಮ ನಾಟಕ ನಿಂತಿಲ್ಲ. ಶಾಸಕರಾಗಿ ಮೂರೂವರೆ ವರ್ಷ ಪೂರ್ಣಗೊಳಿಸಿದ್ದೀರಿ. ಈ ಅವಧಿಯಲ್ಲಿ ಎಷ್ಟು ಗ್ರಾಮಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸಿದ್ದೀರಿ? ಎಷ್ಟು ರೈತರ ಹೊಲಗಳಿಗೆ ಭೇಟಿ ನೀಡಿದ್ದೀರಿ? ಎಂದು ನಡಹಳ್ಳಿ ಪ್ರಶ್ನಿಸಿದರು.
ತಾಳಿಕೋಟೆ ಭಾಗದಲ್ಲಿ ರೈತರು ೫೦ ಸಾವಿರ ಎಕರೆ ಬೆಳೆನಷ್ಟಕ್ಕೆ ಪರಿಹಾರ ಹಾಗೂ ರೈತರ ₹೫ ಲಕ್ಷದವರೆಗಿನ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸಿದ್ದಾರೆ. ಆದರೆ ಹೋರಾಟ ಆರಂಭವಾದ ಬಳಿಕ ಹೊಲಕ್ಕೆ ತೆರಳಿ ಬರ ಪರಿಸ್ಥಿತಿ ಪರಿಶೀಲಿಸಿರುವುದು ಯಾವ ರೀತಿಯ ರೈತಪರ ಕಾಳಜಿ? ಎಂದು ಪ್ರಶ್ನಿಸಿದರು.
ಎಂ.ಬಿ.ಪಾಟೀಲರ ಹೆಸರು ಹೇಳಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಭಾಗವಾಗಿರುವ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಸಬೇಕು. ಅದು ಸಾಧ್ಯವಾಗದಿದ್ದರೆ ರೈತರ ಪರವಾಗಿ ಧರಣಿ ನಡೆಸಲಿ ಎಂದು ಸವಾಲು ಹಾಕಿದರು.
ಈ ವೇಳೆ ಮುಖಂಡ ಸಿದ್ದರಾಜ ಹೊಳಿ ಮಾತನಾಡಿದರು.
ಹೋರಾಟದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ–ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು. ಅಟೋ, ಟ್ಯಾಕ್ಸಿ, ಬಸ್ ಸೇರಿದಂತೆ ವಿವಿಧ ವಾಹನಗಳ ಸಂಚಾರವೂ ಸಂಪೂರ್ಣ ಸ್ಥಗಿತಗೊಂಡು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪರಿಣಾಮವಾಗಿ ಪಟ್ಟಣದ ಪ್ರಮುಖ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು.
ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಮಲಕೇಂದ್ರಗೌಡ ಪಾಟೀಲ, ಮುನ್ನಧಣಿ ನಾಡಗೌಡ, ಹರೀಶ್ ನಾಟೆಕಾರ, ಗಿರೀಶ ಪಾಟೀಲ, ಪರಶುರಾಮ ನಾಲತವಾಡ, ಕೆಂಚಪ್ಪ ಬಿರಾದಾರ, ಗೌರಮ್ಮ ಹುನಗುಂದ ಸೇರಿದಂತೆ ರೈತರು ಭಾಗಿಯಾಗಿದ್ದರು.
ಬಾಕ್ಸ್
ಹೋರಾಟಕ್ಕೆ ತಾತ್ಕಾಲಿಕ ವಿರಾಮ
ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ತಾಲೂಕಿನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರೈತರು ಪ್ರತಿದಿನ ಒಂದೊಂದು ಪಂಚಾಯತಿಯಂತೆ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತಿದ್ದು, ರೈತರ ಒಗ್ಗಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಸರ್ಕಾರ ತಕ್ಷಣ ಬರ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು ಎಂದು ನಡಹಳ್ಳಿ ಎಚ್ಚರಿಸುತ್ತಲೇ ಇದ್ದಾರೆ.
ರವಿವಾರ ಮತ್ತು ಸೋಮವಾರ ಸರ್ಕಾರಿ ರಜೆ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗುತ್ತಿದ್ದು, ಮಂಗಳವಾರದಿಂದ ಮತ್ತೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

