ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಮಾಜಿ ಸಚಿವ ಹಾಗೂ ಬಸವನಬಾಗೇವಾಡಿ ಶಾಸಕರು ಆದ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ಅವರು ವೈಯಕ್ತಿಕ 5 ಲಕ್ಷ ರೂ. ಧನ ಸಹಾಯ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ತಮ್ಮನ್ನು ಭೇಟಿಯಾದ ಕಾನಿಪ ಸಂಘ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳ ಮತ್ತು ಸದಸ್ಯರ ಸಮ್ಮುಖದಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಅವರಿಗೆ ರೂ.5 ಲಕ್ಷ ಹಣ ನೀಡಿದರು.
2025 ರಲ್ಲಿ ನಡೆದಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರದಲ್ಲಿ ಭಾಗಿಯಾಗಿದ್ದ ವೇಳೆ ಮಾಜಿ ಸಚಿವ ಶಿವಾನಂದ ಪಾಟೀಲರು ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕಕ್ಕೆ ವೈಯುಕ್ತಿಕವಾಗಿ 5 ಲಕ್ಷ ರೂಪಾಯಿ ನೀಡುವ ವಾಗ್ದಾನ ಮಾಡಿದ್ದರು. ಈ ಹಿನ್ನಲೆ ಇಂದು ಶಾಸಕ ಶಿವಾನಂದ ಪಾಟೀಲರು ಐದು ಲಕ್ಷ ರೂಪಾಯಿಗಳನ್ನು ಸಂಘದ ಅಭಿವೃದ್ದಿಗಾಗಿ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕ ಶಿವಾನಂದ ಪಾಟೀಲರು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಪತ್ರಕರ್ತರ ಹಿತ ಕಾಪಾಡುವ ಕೆಲಸಗಳನ್ನು ಕಾನಿಪ ಸಂಘ ಹೀಗೆಯೇ ಮುಂದುವರಿಸಿಕೊಂಡು ಹೋಗಲಿ ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಶಿವಾನಂದ ಪಾಟೀಲರಿಗೆ ಮಾಹಿತಿ ನೀಡಿ, ಭವಿಷ್ಯದಲ್ಲಿ ತಮ್ಮ ಸಹಾಯ ಸಹಕಾರ ಸಂಘಕ್ಕಿರಲಿ ಎಂದು ಮನವಿ ಮಾಡಿಕೊಂಡರು.
ಈ ವೇಳೆ ಹಿರಿಯ ಪತ್ರಕರ್ತರಾದ ಸೀತಾರಾಮ ಕುಲಕರ್ಣಿ, ರಾಜೂ ಕೊಂಡಗೂಳಿ, ಸಂಘಟನಾ ಕಾರ್ಯದರ್ಶಿಗಳಾದ ಮೋಹನ ಕುಲಕರ್ಣಿ, ದೇವೇಂದ್ರ ಹೆಳವರ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ಸಮೀರ್ ಇನಾಂದಾರ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಿವಾಸ ಸೂರಗೊಂಡ, ಗುರು ಗದ್ದನಕೇರಿ, ಪವನ ಕುಲಕರ್ಣಿ, ಸಂಜೀವ ಕುಲಕರ್ಣಿ ಸೇರಿದಂತೆ ಹಲವರು ಹಾಜರಿದ್ದರು.

