ವ್ಹಿಡಿಸಿಸಿ ಬ್ಯಾಂಕ್ ನಿಂದ ಸಾಲ | ವಿಜಯಪುರದಲ್ಲಿ ಶಾಸಕ ಶಿವಾನಂದ ಪಾಟೀಲ ಪ್ರಕಟಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಫುರ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ವ್ಹಿಡಿಸಿಸಿ ಬ್ಯಾಂಕ್) ಜಿಲ್ಲೆಯ ಗ್ರಾಮೀಣ ಭಾಗದ ರೈತರಿಗೆ ತಾವು ವ್ಯವಸಾಯ ಮಾಡುವ ತೋಟದಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ಮನೆ ಸಾಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಬಸವನಬಾಗೇವಾಡಿ ಕ್ಷೇತ್ರದ ಶಾಸಕರಾದ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.
ಶನಿವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ 107ನೇ ವಾರ್ಷಿಕ ಮಹಾಸಭೆಯ ಹಿನ್ನೆಲೆಯಲ್ಲಿ ಬ್ಯಾಂಕಿನ ಸಾಧನೆಗಳ ಕುರಿತು ವಿವರಿಸಲು ಕರೆಯಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ರೈತರ ಬೇಡಿಕೆಗಳಿಗೆ ಸ್ಪಂದಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಈ ಯೋಜನೆಯಡಿ ಪ್ರತಿಯೊಬ್ಬ ರೈತರಿಗೆ ಗರಿಷ್ಠ 20 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುತ್ತಿದ್ದು, ಇದುವರೆಗೆ 202 ರೈತರಿಗೆ ಬ್ಯಾಂಕು 27.64 ಕೋಟಿ ರೂ. ಸಾಲ ಮಂಜೂರು ಮಾಡಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ರೈತರಿಗೂ ಮನೆ ಸಾಲ ನೀಡಲು ಬ್ಯಾಂಕು ಸಮರ್ಥವಾಗಿದ್ದು, ವಾರ್ಷಿಕ ಶೇ. 10 ರೂ. ಬಡ್ಡಿದರದಲ್ಲಿ ಬ್ಯಾಂಕು ಮನೆ ನಿರ್ಮಿಸಿಕೊಳ್ಳಲು ಸಾಲ ನೀಡುವುದು. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಶಿವಾನಂದ ಪಾಟೀಲ ಕೋರಿದರು.
ಇದೇ ರೀತಿ ಬ್ಯಾಂಕು ಹೈನುಗಾರಿಕೆ, ಒಣದ್ರಾಕ್ಷಿ ತಯಾರಿಕೆಗೂ ರೈತರಿಗೆ ಸಾಲ ನೀಡಿ ನೆರವಾಗುತ್ತ ಬಂದಿದೆ. 3.55 ಲಕ್ಷ ರೈತರಿಗೆ 2118 ಕೋಟಿ ರೂ. ಸಾಲ ನೀಡಿದ್ದು, ಬ್ಯಾಂಕಿನ ಇತಿಹಾಸದಲ್ಲಿ ಇದು ದಾಖಲಾರ್ಹ ಸಾಧನೆಯಾಗಿದೆ. ಕೃಷಿ ಸಾಲ ನೀಡುವಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದು ಹೇಳಲು ತಮಗೆ ತುಂಬಾ ಸಂತೋಷವೆನಿಸುತ್ತದೆ ಎಂದು ಅವರು ನುಡಿದರು.
ಅದೇ ರೀತಿ ಬ್ಯಾಂಕು ಇದುವರೆಗೆ ರಾಜ್ಯದ 37 ಸಹಕಾರಿ ಸಕ್ಕರೆ ಕಾರಖಾನೆಗಳ ಸ್ಥಾಪನೆಗಾಗಿ ಯೋಜನಾ ವೆಚ್ಚ ಮತ್ತು ಸಮರ್ಪಕ ನಿರ್ವಹಣೆಗಾಗಿ ಅವಧಿ ಸಾಲ ಹಾಗೂ ದುಡಿಯುವ ಬಂಡವಾಳ ಸಾಲಗಳನ್ನು ನೀಡಿದ್ದು, ಈ ವರ್ಷಾಂತ್ಯಕ್ಕೆ 21 ಸಕ್ಕರೆ ಕಾರಖಾನೆಗಳಿಂದ ಒಟ್ಟು 881.57 ಕೋಟಿ ರೂ.ಬರತಕ್ಕ ಸಾಲ ಬಾಕಿ ಇದೆ. ಅತೀ ಹೆಚ್ಚು ಸಕ್ಕರೆ ಕಾರಖಾನೆಗಳಿಗೆ ಸಾಲ ನೀಡಿದ ಹೆಗ್ಗಳಿಕೆ ಈ ಬ್ಯಾಂಕಿಗಿದೆ ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ದೇಶದಲ್ಲಿಯೇ ನಂಬರ ಒನ್ ಸ್ಥಾನದಲ್ಲಿದ್ದ ಜಿಲ್ಲೆಯ ನಂದಿ ಸಹಕಾರಿ ಸಕ್ಕರೆ ಕಾರಖಾನೆಗೂ ಬ್ಯಾಂಕು ಸಾಲ ನೀಡಿದೆ. ಆದರೆ ಈ ಸಕ್ಕರೆ ಕಾರಖಾನೆಯ ಈಗಿನ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಈ ಕಾರಖಾನೆಗೆ ಈ ಅವಸ್ಥೆ ಬರಬಾರದಾಗಿತ್ತು. ನಾವು ಈ ಕಾರಖಾನೆಗೆ ಸಾಲ ನೀಡದೇ ಹೋಗಿದ್ದರೆ ಎರಡು ವರ್ಷಗಳ ಹಿಂದೆಯೇ ಕಾರಖಾನೆ ಮುಚ್ಚಿ ಹೋಗುತ್ತಿತ್ತು ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಬಿ.ಎಸ್.ಪಾಟೀಲ (ಯಾಳಗಿ), ಕಲ್ಲನಗೌಡ ಪಾಟೀಲ, ಶೇಖರ ದಳವಾಯಿ, ಹಣಮಂತರಾಯಗೌಡ ಪಾಟೀಲ, ಶ್ರೀಮತಿ ಸಂಯುಕ್ತಾ ಎಸ್. ಪಾಟೀಲ, ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ಚಂದ್ರಶೇಖರ ಪಾಟೀಲ, ಅರವಿಂದ ಪೂಜಾರಿ, ವೃತ್ತಿಪರ ನಿರ್ದೇಶಕರಾದ ಎಸ್.ಎಸ್.ಜಹಾಗೀರದಾರ, ಎಂ.ಸಿ.ಗುಂದಗಿ, ಎಸ್.ಎಸ್
ಸಿಂಧೆ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಢವಳಗಿ, ಆಡಳಿತ ಮಂಡಳಿ ಸಲಹೆಗಾರರಾದ ಜೆ.ಕೊಟ್ರೇಶಿ, ಡಿಡಿಎಂ ನಬಾಡ್೯ ವಿಶೇಷ ಆಹ್ವಾನಿತರಾದ ವಿಕಾಸ ರಾಠೋಡ, ಸಹಕಾರ ಸಂಘಗಳ ಉಪನಿಬಂಧಕಿ ಶ್ರೀಮತಿ ಎಸ್.ಕೆ.ಭಾಗ್ಯಶ್ರೀ, ಬ್ಯಾಂಕಿನ ಅಧಿಕಾರಿಗಳಾದ ಸುರೇಶ ಪಾಟೀಲ, ಸತೀಶ ಪಾಟೀಲ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

