ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮರಾಠಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸುವುದರ ಜೊತೆಗೆ ಕನ್ನಡ ಭಾಷೆಯನ್ನೂ ಗೌರವಿಸಬೇಕು. ಬಹುಭಾಷಾ ಜ್ಞಾನವು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನ ವಿಜಯಪುರ ಜಿಲ್ಲಾಧ್ಯಕ್ಷ ದೀಪಕ್ ಶಿಂತ್ರೆ ಹೇಳಿದರು.
ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನ ವತಿಯಿಂದ ಮರಾಠಿ ವಿದ್ಯಾಲಯದಲ್ಲಿ ‘ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ‘ಮೊಬೈಲ್ ಬಿಟ್ಟು, ಪುಸ್ತಕ ಹಿಡಿಯಿರಿ’ ವಿಷಯದ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾತೃಭಾಷೆಯೊಂದಿಗೆ ಇತರ ಭಾಷೆಗಳ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಜೆ. ಜಹಾಗೀರದಾರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ನ್ನು ಮಿತವಾಗಿ ಬಳಸುವುದರ ಜೊತೆಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಕವಿ ಮಾರುತಿ ತರಸೆ ಅವರು ಪ್ಲಾಸ್ಟಿಕ್ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಎ. ವಿ. ದಂಡಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕರಾಮಸಾಪದ ಸಹಕಾರ್ಯವಾಹ ಶ್ರೀಮತಿ ಲತಾತಾಯಿ ಝಿಂಗಾಡೆ, ಖಜಾಂಚಿ ಕನ್ನಯ್ಯ ಪೇಠಕರ, ಶ್ರೀಪಾದ ಪಾಟಣಕರ, ಶ್ರೀಮತಿ ಅಂಜಲಿ ಗಿರಗಾಂವಕರ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ರೂಪಾ ಹಿಬಾರೆ ಕಾರ್ಯಕ್ರಮ ನಿರೂಪಿಸಿದರು.

