ಆಲಮಟ್ಟಿ: ಸಮೀಪದ ಚಿಮ್ಮಲಗಿ ಭಾಗ ೧ (ಬಿ)ಪುನರ್ವಸತಿ ಕೇಂದ್ರದಲ್ಲಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರಸಕ್ತ ಸಾಲಿನ ಮೊದಲನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.
ಮಕ್ಕಳ ದಾಖಲಾತಿ, ಹಾಜರಾತಿ, ವೈಯಕ್ತಿಕ ಶೈಕ್ಷಣಿಕ ಪ್ರಗತಿ, ಕ್ರೋಡೀಕರಿಸಿದ ಪ್ರಗತಿ ಪತ್ರ, ಸಹಪಠ್ಯ ಸಾಂಸ್ಕೃತಿಕ ಚಟುವಟಿಕೆಗಳ ಮಾಹಿತಿ, ಶಾಲಾಭಿವೃಧ್ಧಿ, ಪಠ್ಯಕ್ರಮ ಆಧಾರಿಸಿ ಅನುಸರಿಸಿದ ಕ್ರಮ, ಶಾಲಾ ಪರಿಸರ ಸೇರಿದಂತೆ ಇತ್ಯಾದಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವಿಷಯದ ಅಂಶಗಳನ್ನು ಪರಿಶೀಲಿಸಲಾಯಿತು.
ಕಾರ್ಯಕ್ರಮದ ಮಾರ್ಗದರ್ಶಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಜಿ.ಆರ್.ಜಾಧವ ಸಮುದಾಯದತ್ತ ಶಾಲಾ ಅಂಶಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಬೆರೆತು ಓದು, ಬರಹದ ಆಸಕ್ತಿ ಬಾಲ್ಯಾವಸ್ಥೆಯಲ್ಲಿಯೇ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಆಧುನಿಕತೆಯ ದಿನಮಾನದಲ್ಲಿಂದು ಸಾಮಾನ್ಯ ಜ್ಞಾನ ಅತ್ಯವಶ್ಯಕ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶಾಲಾ ಮುಖ್ಯಗುರು ಎಸ್.ಎಂ.ಮಾದರ ಮಾತನಾಡಿ, ಮಕ್ಕಳಿಗೆ ಕಲಿಕಾಭಿರುಚಿ ಮೂಡಿಸಲು ಶಾಲಾ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ. ಶಾಲಾ ಕೊಠಡಿಗಳು ಸುಂದರವಾಗಿ ಚಿತ್ರಪಟಗಳಿಂದ ಕೂಡಿವೆ. ಮಕ್ಕಳಿಗೆ ಓದಿನ, ಅದ್ಯಯನದ ಆಸಕ್ತಿ ಕೆರಳಿಸುವಂತಿವೆ. ಸ್ವಚ್ಛ, ಪರಿಸರದಲ್ಲಿ ಜ್ಞಾನಾರ್ಜನೆ ಕೈಂಕರ್ಯ ತಮ್ಮ ಶಾಲೆಯಲ್ಲಿ ಶ್ರದ್ಧೆಯಿಂದ ಸಾಗುತ್ತಿದೆ ಎಂದರು.
ಈ ವೇಳೆ ಗುರುಮಾತೆಯರಾದ ಶ್ರೀಮತಿ ಎನ್.ಎಸ್.ನಾಲ್ವತವಾಡ, ಶ್ರೀಮತಿ ವಾಯ್.ಬಿ.ದೊಡಮನಿ, ಶಿಕ್ಷಕ ಎಸ್.ಬಿ.ಇಂಡಿ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment