ದೇವರಹಿಪ್ಪರಗಿ: ಸತತ ನಾಲ್ಕು ದಿನಗಳಿಂದ ನಡೆದ ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆ ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರ ಮದ್ಯೆ ಭಾನುವಾರ ಸಂಪನ್ನವಾಯಿತು.
ಪಟ್ಟಣದ ಹೊರವಲಯದ ಮಲ್ಲಯ್ಯನ ದೇವಸ್ಥಾನಕ್ಕೆ ಕಳೆದ ಗುರುವಾರದಂದು ತೆರಳಿದ್ದ ರಾವುತರಾಯನನ್ನು ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತಾಧಿಗಳ ಜಯಘೋಷದ ಮದ್ಯೆ ಮೂಲ ದೇವಸ್ಥಾನಕ್ಕೆ ಕರೆ ತರಲಾಯಿತು. ನಾಡಿನ ಹಾಗು ಮಹಾರಾಷ್ಟç, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ ಭಕ್ತ ಸಮೂಹ ವಾಸ್ತವ್ಯ ಹೂಡಿ ವಿವಿಧ ಪೂಜಾ ಕರ‍್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು. ಬೆಳಿಗ್ಗೆ ೭.೦೦ ಗಂಟೆಗೆ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತಾಧಿಗಳು ಭಕ್ತಿಯೊಂದಿಗೆ ಭಂಡಾರ ಎಸೆದು ಏಳುಕೋಟಿ ಏಳುಕೋಟಿ ಏಳುಕೋಟಿ ಗೇ ಎಂಬ ಜಯಕಾರದೊಂದಿಗೆ ಭಕ್ತಿ ಸಮರ್ಪಿಸಿದರು.
ಜಾತ್ರೆಯಲ್ಲಿ ವಿಶೇಷವಾಗಿ ಪುರುಷ ವಗ್ಗೆಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ಹಣೆ ತುಂಬ ಭಂಡಾರ ಬಡಿದುಕೊಂಡು ರಾವುತರಾಯನ ಬಂಡಿ ಮುಂದೆ ಕುಣಿಯುತ್ತ ಜನರ ಗಮನ ಸೆಳೆದರು. ಪಟ್ಟಣದ ಜನರು ನಾಲ್ಕು ದಿನಗಳವರೆಗೆ ತಮ್ಮ ಕೆಲಸ ಕರ‍್ಯಗಳನ್ನು ಬದಿಗೊತ್ತಿ, ಪ್ರತಿದಿನ ಪೂಜಾಕಾರ್ಯ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೋತ್ಸವಕ್ಕೆ ಮೆರಗು ತಂದರು. ಜಾತ್ರೆಯುದ್ದಕ್ಕೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ ವಹಿಸಿದ್ದರಿಂದ ಯಾವುದೆ ಅಹಿತಕರ ಘಟನೆಗಳು ನಡೆಯದೆ ಶಾಂತಿಯಿಂದ ಮುಕ್ತಾಯಗೊಂಡ ಜಾತ್ರೆ ಜನಸಮೂಹದ ಪ್ರಶಂಸೆಗೆ ಪಾತ್ರವಾಯಿತು.
ಕಾರಣಿಕರ ಭವಿಷ್ಯದ ಹೇಳಿಕೆ
ರಾವುತರಾಯ ಪ್ರತಿವರ್ಷ ಮಲ್ಲಯ್ಯ ದೇವಸ್ಥಾನಕ್ಕೆ ತೆರಳುವಾಗ ಹಾಗೂ ಬರುವಾಗ ಕಾರಣಿಕರು ಭವಿಷ್ಯದ ಕುರಿತು ಹೇಳಿಕೆಗಳನ್ನು ಹೇಳುವ ವಾಡಿಕೆಯಿದ್ದು, ಈ ಬಾರಿ ಅವರು ಹೇಳಿದಂತೆ, ಕಾಲಮಾನ ಬಹಳ ಕಷ್ಟಬಂತು. ಜನರಿಗೆ ಎಷ್ಟು ಹೇಳಿದರೂ ತಿಳಿಯುತ್ತಿಲ್ಲ. ಕರ್ಮ, ಧರ್ಮಗಳಲ್ಲಿ ಧರ್ಮ ಕಡಿಮೆಯಾಗಿ ಕರ್ಮದ ತೂಕವೇ ಹೆಚ್ಚಾಗುತ್ತಿದೆ. ಸ್ವಾತಿ, ಚಿತ್ತಾ ಮಳೆಗಾಲದ ಮಳೆಗಳಲ್ಲ. ಆದರೂ ಮಳೆ ನೀಡಿ ಬಿಳಿಜೋಳ ಮುತ್ತಿನಂಗೆ ಮಾಡಿ ತೋರಿಸುವೆ. ಎಂಟು ಎತ್ತು ಕಟ್ಟಿದವನು ಈಗ ಒಂಟ ಎತ್ತು ಕಟ್ಟುತ್ತಾನ. ಛಪ್ಪನ್ನಾರು ದೇಶ ಸುತ್ತಿದ್ದರೂ ಬರವೇ ಕಾಣುವುದು. ಧರ್ಮದಿಂದ ನಡೆದವರನ್ನು ಅಂಗೈಯಲ್ಲಿ ಹಿಡಿದು ಕಾಯುವೆ. ಇಷ್ಟು ವರ್ಷ ಬಡಿಗೆಗಳು ಹಾರಾಡಿಲ್ಲ. ಇನ್ನೂ ಹಾರಾಡುತ್ತವೆ ಎಂದು ಹೇಳುವ ಮೂಲಕ ಕಷ್ಟಕಾಲದ ಕುರಿತು ಸುಳಿವು ನೀಡಿದರು.