– ಚೇತನ ಶಿವಶಿಂಪಿ
ಮುದ್ದೇಬಿಹಾಳ: ಶ್ರೀಗಳ ದಂಡು, ಪಕ್ಷ ಬೇಧ ಮರೆತು ರಾಜಕೀಯ ನಾಯಕರ ಆಗಮನ. ಹರಿದುಬಂದ ಜನ ಸಮೂಹ. ನಿಲ್ಲಲೂ ಜಾಗವಿಲ್ಲದಷ್ಟು ಅಜ್ಜನ ಸಂಪಾದನೆ. ಕಾಣಿಕೆ ನೀಡಬೇಕು ಅಂದಿದ್ದೇ ತಡ ಲಕ್ಷ ರೂಪಾಯಿಗೂ ವಿಚಾರ ಮಾಡದೇ, ಬಂಗಾರಕ್ಕೂ ಲೆಕ್ಕ ಹಾಕದೇ ನಾ ಮುಂದು ತಾ ಮುಂದು ಅಂತ ಓಡಿ ಬಂದು, ಅಜ್ಜನ ಮೇಲಿರುವ ಪ್ರೀತಿಯನ್ನು ತೋರಲು ಒದಗಿ ಬಂದ ಅವಕಾಶದ ಸದುಪಯೋಗ ಪಡೆದುಕೊಂಡ ಭಕ್ತರು. ಸುಮಾರು ವರ್ಷಗಳಿಂದ ಈ ಭಾಗದಲ್ಲಿ ನಿಸ್ವಾರ್ಥ ಸೇವೆ ನೀಡಿದ ಅಜ್ಜನ ಕಣ್ಣಲ್ಲಿ ಮಾತು ಬಾರದಷ್ಟು ಆನಂದ ಭಾಷ್ಪ. ಇಂತಹದ್ದೊಂದು ಸನ್ನಿವೇಶ ಕಂಡಿದ್ದು ತಾಲೂಕಿನ ಸುಕ್ಷೇತ್ರ ಕುಂಟೋಜಿ ಬಸವೇಶ್ವರ ದೇವಸ್ಥಾನದಲ್ಲಿ.
ಅದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆ. ಆದರೆ ಅಲ್ಲಿ ನೆರೆದಿದ್ದ ಸಮೂಹ ಮಾತ್ರ ಜಾತಿ, ಮತ, ಬೇಧ, ಪಕ್ಷ ಎನ್ನದೇ ನಿಜವಾಗಿಯೂ ಅಜ್ಜನನ್ನು ಪ್ರೀತಿಸುವ ಜನ.
ಸನ್ಯಾಸಿಗಳಿಗೆ ಭಕ್ತರ ಸಮೂಹ ಇರೋದು ಸಹಜ. ಆದರೆ ಈ ಸಂಸ್ಥಾನ ಮಠ ಅತ್ಯಂತ ಚಿಕ್ಕದು. ಆದರೆ ಆ ಪೀಠವನ್ನು ಅಲಂಕರಿಸುವ ಅಜ್ಜನ ಮನಸ್ಸು ಮಾತ್ರ ಎಷ್ಟು ದೊಡ್ಡದೆಂದು ಗೊತ್ತಾಗಿದ್ದು ಈ ಸಭೆ ನೋಡಿದ ಬಳಿಕವೇ ಅಂತಾರೆ ಬಹಳಷ್ಟು ಭಕ್ತರು. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಮಾತ್ರವಲ್ಲದೇ ದೂರದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು.
ದೇವಿಕಾ ಸುಬ್ಬರಾವ ಫೌಂಡೇಶನ್, ಬಾಲಾಜಿ ಶುಗರ್ಸ್ ಕಂಪನಿ, ಅಸ್ಕಿ ಫೌಂಡೇಶನ್, ಮೂಕಿಹಾಳ ಗ್ರಾಮದ ಸದ್ಭಕ್ತರು ಸೇರಿದಂತೆ ಅನೇಕರು ಎಲ್ಲ ರೀತಿಯ ಸೇವೆಯ ಸಹಕಾರ ನೀಡುವ ಭರವಸೆ ನೀಡಿದರು.
Related Posts
Add A Comment