ದೇವರಹಿಪ್ಪರಗಿ: ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಗೆ ವಿವಿಧೆಡೆಗಳಿಂದ ಆಗಮಿಸಿದ ಅಭ್ಯರ್ಥಿಗಳು ಸರಿಯಾದ ಮಾಹಿತಿ, ಸೌಲಭ್ಯಗಳು ಇಲ್ಲದ ಕಾರಣ ಪರದಾಡಿದ ಪ್ರಸಂಗ ಭಾನುವಾರ ಕಂಡು ಬಂದವು.
ಪಟ್ಟಣದ ವೆಂಕಟೇಶ್ವರ ಕಾಲೇಜು ಹಾಗೂ ಬಿ.ಎಲ್.ಡಿ,ಇ ಸಂಸ್ಥೆಯ ಕಾಲೇಜಿನಲ್ಲಿ ಭಾನುವಾರ ಜರುಗಿದ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಯಲ್ಲಿ ಆಗಮಿಸಿದ ದೂರದ ಅಭ್ಯರ್ಥಿಗಳಿಗೆ ಸರಿಯಾದ ಮಾಹಿತಿ ಹಾಗೂ ಸೌಲಭ್ಯಗಳಿಲ್ಲದೇ ಪರದಾಡುವಂತಾಯಿತು.
ಪಟ್ಟಣದಲ್ಲಿ ಭಾನುವಾರ ಜಾತ್ರೆಯಿದ್ದ ಕಾರಣ ಸಿಂದಗಿ, ತಾಳಿಕೋಟೆ, ಬಸವನಬಾಗೇವಾಡಿಗಳಿಂದ ಬರುವ ಬಸ್‌ಗಳು ಬಹಳ ದೂರವೇ ನಿಂತ ಕಾರಣ ಬೇರೆ ಪರ್ಯಾಯ ಸಾರಿಗೆ ವ್ಯವಸ್ಥೆ ಇರದ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ನಡೆದುಕೊಂಡು ವಿಳಂಬವಾಗಿ ಬರುವಂತಾಯಿತು. ಪಟ್ಟಣದಲ್ಲಿ ಅಟೋರಿಕ್ಷಾಗಳಿದ್ದರೂ ಸಹ ಜಾತ್ರೆಯ ಕಾರಣ ಮುಖ್ಯರಸ್ತೆಗಳು ಜನಜಂಗುಳಿಯಿಂದ ಕೂಡಿದ್ದ ಪರಿಣಾಮ ರಿಕ್ಷಾಗಳು ಸಹ ಚಲಿಸಲಿಲ್ಲ. ಇನ್ನೂ ದೂರದ ಅಭ್ಯರ್ಥಿಗಳಿಗೆ ಪಟ್ಟಣದ ಪರೀಕ್ಷಾ ಕೇಂದ್ರಗಳ ಮಾಹಿತಿ ಇರದ ಕಾರಣ ಕೇಳುತ್ತಾ ಅಲೆದಾಡುವಂತಾಯಿತು.
ಪರೀಕ್ಷಾ ಕೇಂದ್ರ ತಲುಪಿದ ಅಭ್ಯರ್ಥಿಗಳಿಗೆ ಪ್ರವೇಶಪತ್ರದ ನಕಲುಪ್ರತಿ ಕಡ್ಡಾಯವಾಗಿ ಇರಬೇಕು ಎಂಬ ವಿಷಯದ ಕುರಿತು ಮಾಹಿತಿ ಇರದ ಕಾರಣ ಪರೀಕ್ಷಾ ಕೇಂದ್ರ ತಲುಪಿದ ನಂತರ ಕೇಂದ್ರದ ಸಿಬ್ಬಂದಿ ತಿಳಿಸಿದಾಗ ದೂರದ ಝರಾಕ್ಸ್ ಅಂಗಡಿಗಳಿಗೆ ಅಲೆಯುವ ಪ್ರಸಂಗ ಎದುರಾಯಿತು. ಎರಡು ಪರೀಕ್ಷೆಗಳ ನಡುವೆ ಸಮಯವಿದ್ದಾಗ ಉಪಹಾರ ಮಾಡಲು ಸಮೀಪದಲ್ಲಿ ಯಾವುದೇ ಉಪಹಾರ ಗೃಹ, ಚಹಾ ಅಂಗಡಿಗಳಿರದೇ ಪಾಲಕರು, ಅಭ್ಯರ್ಥಿಗಳು ನಿರಾಶೆ ಅನುಭವಿಸುವಂತಾಯಿತು.
ಮುಂದಿನ ದಿನಗಳಲ್ಲಿ ಸರ್ಕಾರ ಪರೀಕ್ಷಾ ಕೇಂದ್ರಗಳ ಆಯ್ಕೆ ಮಾಡುವಾಗ ಮೂಲಭೂತ ಸೌಲಭ್ಯಗಳಿರುವ ಕಾಲೇಜುಗಳನ್ನು ಆಯ್ಕೆ ಮಾಡಬೇಕು. ಈ ಮೂಲಕ ಪರೀಕ್ಷಾರ್ಥಿಗಳ ತೊಂದರೆ ತಪ್ಪಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಅಭ್ಯರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Related Posts
Add A Comment