ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಜಿಲ್ಲಾಧಿಕಾರಿ ಡಾ. ಆನಂದ. ಕೆ. ಸಾರ್ವಜನಿಕರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ ನೀಡುವ ಅಗತ್ಯ ಸೂಚನೆಗಳನ್ನು ಪಾಲಿಸುವುದರೊಂದಿಗೆ ಗಣೇಶ ಚತುರ್ಥಿಯನ್ನು ಅರ್ಥಪೂರ್ಣ ಹಾಗೂ ಶಾಂತಿ- ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಗಣೇಶ ಹಬ್ಬ ಹಬ್ಬದ ಆಚರಣೆ ಕುರಿತ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಸಂಭ್ರಮದಿಂದ ಆಚರಿಸುವಂತೆ ವಿವಿಧ ಸಮಿತಿ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈಗಾಗಲೇ ನಾಲ್ಕೈದು ಸಲ ಶಾಂತಿ ಸಭೆ ಮಾಡಲಾಗಿದೆ. ಗಣೇಶ ವಿಸರ್ಜನೆಗೆ ನಾಲ್ಕು ಎಕರೆ ಜಾಗದಲ್ಲಿ ದರ್ಗಾ ಜೈಲು ಬಳಿ ಕೃತಕ ಹೊಂಡ ನಿರ್ಮಾಣ ಮಾಡಲಾಗಿದೆ. ಇನ್ನೊಂದೆಡೆ ನಗರದ ಬಹುತೇಕ ಗಜಾನನ ಮಂಡಳಿಗಳು, ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಳಕೆ ಮಾಡದೇ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದನ್ನು ಪ್ರಶಂಸಿಸಿದ ಜಿಲ್ಲಾಧಿಕಾರಿಗಳು, ಪರಿಸರ ಸ್ನೇಹಿ ಹಬ್ಬ ಆಚರಿಸಲು ಸಲಹೆ ಮಾಡಿದರು.
ಡಿಜೆ ಹಾಗೂ ವಿದ್ಯುತ್ ಅವಘಡದಿಂದ ಯಾವುದೇ ಘಟನೆಗಳಾಗದಂತೆ ನೋಡಿಕೊಳ್ಳಲು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಬೇಕು. ಗಜಾನನ ಮಂಡಳಿಯವರು ಸಾಂಸ್ಕೃತಿಕ ಮೆರಗು ಹೆಚ್ಚಿಸುವ ಕಲಾ ಪ್ರಕಾರಗಳನ್ನು ಹೆಚ್ಚಿಸಿಕೊಳ್ಳಲಿ. ಆದರೆ ಡಿಜೆ ಬಳಕೆ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದರು. ದರ್ಗಾ ಸ್ಥಳದಲ್ಲಿ ಒಂದೇ ಬಾರಿಗೆ ಎರಡು ಗಣೇಶ ಮೂರ್ತಿ ವಿಸರ್ಜನೆ ಮಾಡಲು ಅವಕಾಶವಿದೆ. ಅದನ್ನು ಗಜಾನನ ಮಂಡಳಿಯವರು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತದ ಸಂಪೂರ್ಣ ಸಹಕಾರವಿದೆ. ಹಾಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಯಾವುದೇ ಸಮಸ್ಯೆ ಇಲ್ಲದೇ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸೋಣ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಸಾರ್ವಜನಿಕ ಹಬ್ಬಗಳಿಗೆ ಜಿಲ್ಲಾಡಳಿತದಿಂದ ಸಹಾಯ ಸಹಕಾರ ಹಾಗೂ ತಮ್ಮಿಂದ ಸಹಾಯ ಸಹಕಾರ ಕೋರುತ್ತೇವೆ ಎಂದರು. ವಿದ್ಯುತ್ ಸಮಸ್ಯೆಗಳಿದ್ದ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಸಿಬ್ಬಂದಿ ರೂಟ್ ಪ್ರಕಾರ ಭದ್ರತೆಯನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಗಣೇಶ ಮೂರ್ತಿ ಎತ್ತರವನ್ನು ಗಜಾನನ ಮಂಡಳಿಗಳು ಗಮನಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ರಾತ್ರಿ ೧೦ ಗಂಟೆ ನಂತರ ಗಜಾನನ ಮಂಡಳಿಗಳು ಧ್ವನಿವರ್ಧಕಗಳನ್ನು ಬಳಕೆ ಸೇರಿದಂತೆ ಒಟ್ಟಾರೆ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಫ್ಲೆಕ್ಸ್ ಹಾಗೂ ಬ್ಯಾನರ್ ಯಾರಿಗೂ ತೊಂದರೆಯಾಗದಂತೆ ಅಳವಡಿಸಬೇಕು. ಸ್ವಯಂ ಸೇವಕರನ್ನು ಬಂದೊಬಸ್ತಿಗೆ ನಿಯೋಜಿಸಿ ಆ ಮೂಲಕ ಶಿಸ್ತುಬದ್ಧವಾಗಿ ಹಾಗೂ ಶಾಂತಿಯಿಂದ ಮೆರವಣಿಗೆ ನಡೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಸಾಮಾಜಿಕ ಜಾಲ ತಾಣದಲ್ಲಿ ಬರುವ ಯಾವುದೇ ಸಂದೇಶಗಳನ್ನು ಪರಾಮರ್ಶಿಸಿ ಪರಿಶೀಲಿಸಿ, ಅಂತಹ ಸಂದೇಶಗಳಿದ್ದರೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಈ ಕುರಿತು ನಿಗಾವಹಿಸಿ ಸೌಹಾರ್ದತೆ ಹಾಗೂ ಶಾಂತಿ ಕಾಪಾಡಬೇಕು. ಪರಸ್ಪರ ಸಹಾಯ ಹಾಗೂ ಸಹಕಾರದಡಿ ಸುಸೂತ್ರವಾಗಿ ಗಣೇಶ ಹಬ್ಬ ಆಚರಿಸಬೇಕು ಎಂದರು.
ತಾಜಬಾವಡಿಯಲ್ಲಿ ಹೈದ್ರಾಬಾದ್ ಮೂಲದ ಟಿಸಿಎಸ್ ಕಂಪನಿ ಅಭಿವೃದ್ದಿ ಕಾಮಗಾರಿ ಆರಂಭಿಸಿದೆ. ಕಾಮಗಾರಿ ನಡೆದಿರುವುದರಿಂದ ಎಲ್ಲ ಗಣಪತಿ ಮಂಡಳಿಯವರ ಜೊತೆಗೆ ಅಲ್ಲಿನ ಸ್ಥಳ ಪರಿಶೀಲನೆ ಮಾಡಲಾಗಿದೆ. ಜಿಲ್ಲಾಡಳಿತ ಎರಡು ಅಡಿಯ ಗಣೇಶ ಮೂರ್ತಿಗಳನ್ನು ತಾಜಬಾವಡಿಯಲ್ಲಿ ವಿಸರ್ಜನೆಗೆ ಅನುಕೂಲ ಕಲ್ಪಿಸಿದೆ ಎಂದರು.
ಜಾಸ್ತಿ ಎತ್ತರದ ಗಣೇಶ ಮೂರ್ತಿಗಳನ್ನು ಮಹಾನಗರ ಪಾಲಿಕೆಯು ನಗರದ ದರ್ಗಾ ಕಾರಾಗೃಹ ಬಳಿ ಗಣೇಶ ಮೂರ್ತಿ ಕೃತಕ ಹೊಂಡ ಸಿದ್ಧಪಡಿಸಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಹೆಸ್ಕಾಂ ಅಧೀಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ ಮಾತನಾಡಿ, ಎಲ್ಲ ಗಜಾನನ ಮಂಡಳಿಯವರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗದಂತೆ ಸುರಕ್ಷತಾ ಕ್ರಮ ಅನುಸರಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಆರ್ ಸಿಸಿಬಿ ಅಳವಡಿಸಿ ವಿದ್ಯುತ್ ಅವಘಡ ತಪ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಪ್ರತಿ ಗಣೇಶ ಮಂಟಪಗಳಲ್ಲಿ ಈ ಆರ್.ಸಿ.ಸಿ.ಬಿ ಉಪಕರಣ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಈ ಸುರಕ್ಷತಾ ಸಾಧನವನ್ನು ಬಳಸುವುದರಿಂದ ಆಗಬಹುದಾದ ದೊಡ್ಡ ಮಟ್ಟದ ಅಪಾಯ ಹಾಗೂ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಅವರು ತಿಳಿಸಿದರು.
ತಾತ್ಕಾಲಿಕ ವಿದ್ಯುತ್ ಜೋಡಣೆಗೆ ನುರಿತ ಎಲೆಕ್ಟ್ರಿಷಿಯನ್ ಅವರಿಂದ ವೈರಿಂಗ್ ಮಾಡಿಸಬೇಕು. ತೆರೆದ ವಿದ್ಯುತ್ ತಂತಿಗಳು ಅಥವಾ ದುರ್ಬಲ ವೈಯರ್ ಗಳನ್ನು ಬಳಸಬಾರದು ಹಾಗೂ ನೀರು ಬೀಳುವ ಸ್ಥಳಗಳಿಂದ ವಿದ್ಯುತ್ ಬಳಕೆ ಸಾಧನ ದೂರವಿಡಬೇಕು. ಆ ಮೂಲಕ ಹಬ್ಬದ ಸಂಭ್ರಮದಲ್ಲಿ ಯಾವುದೇ ರೀತಿಯ ವಿದ್ಯುತ್ ಅವಘಡಗಳಿಗೆ ಆಸ್ಪದ ನೀಡದೆ, ಸುರಕ್ಷತಾ ನಿಯಮಗಳನ್ನು ಪ್ರತಿ ಮಂಡಳಿಯವರು ತಪ್ಪದೇ ಪಾಲಿಸಿ ಸುರಕ್ಷಿತವಾಗಿ ಗಣೇಶೋತ್ಸವ ಆಚರಿಸಬೇಕೆಂದು ಅವರು ಸಲಹೆ ನೀಡಿದರು.
ವಿವಿಧ ಗಜಾನನ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ತಮ್ಮ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್,ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೇರಿದಂತೆ ವಿಜಯಪುರ ಜಿಲ್ಲಾ ವಿವಿಧ ಗಜಾನನ ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

