– ಆಶಾ
ಉಡುಪಿ
ಉದಯರಶ್ಮಿ ದಿನಪತ್ರಿಕೆ
ನನಗೀಗ ಹನ್ನೆರಡರ ಪ್ರಾಯ. ಹುಟ್ಟುತ್ತಲೇ ಬಹು ಅಂಗಾಂಗ ವೈಕಲ್ಯದಿಂದ ಹುಟ್ಟಿದ ನತದೃಷ್ಟ ಮಗು ನಾನು.
ಅಮ್ಮ ಸತ್ತಾಗ ನಾನಿನ್ನೂ ಏಳು ತಿಂಗಳ ಹಸುಗೂಸಂತೆ.
ಅದೇನೋ ಬಾಣಂತಿ ಸನ್ನಿಯಿಂದ ತೀರಿಹೋಗಿದ್ದಳು ಅಮ್ಮ. ” ಅಮ್ಮನನ್ನು ತಿಂದುಕೊಂಡ ಮಾರಿ ಅವಳೊಂದಿಗೆ ಇದೂ ಕೂಡ ಹೋಗಿದ್ದರೆ ಅದೆಷ್ಟೋ ಚೆನ್ನಾಗಿತ್ತು..” ಅಜ್ಜಿಯ ಬಾಯಿಯಿಂದ ಪ್ರತಿ ಬಾರಿ ಕೇಳುವ ಮಾತಿದು. ಹಾಗಂತ ನನ್ನಜ್ಜಿ ಕೆಟ್ಟವಳೇನೂ ಅಲ್ಲ ಆದರೆ ಆಕೆಯ ಮಗನ ಮೇಲಿನ ಅಂದರೆ ನನ್ನಪ್ಪನ ಮೇಲಿನ ಮಮಕಾರದಿಂದ ಅಜ್ಜಿ ಹೇಳುತ್ತಿದ್ದ ಮಾತಾಗಿತ್ತದು. ಅವಳಿಗೂ ನನ್ನ ಪರಿಸ್ಥಿತಿ ಕಂಡು ಒಂದಿಷ್ಟು ಮರುಕವಿದ್ದರು ಅಪ್ಪನ ಜೀವನ ಕಿತ್ತುಕೊಂಡ ಶನಿಯಂತೆ ಕಂಡಿದ್ದೆ ತಾನು..

‘ಭಗವಂತ ನನ್ನನ್ನು ಕೂಡ ನಿನ್ನ ಬಳಿ ಕರೆದುಕೋ, ಅಪ್ಪನಿಗೆ ನನ್ನಿಂದ ಮುಕ್ತಿ ನೀಡು’ ಎಂದು ನಾನೂ ಕೂಡ ಬೇಡದೆ ಇದ್ದ ದಿನವೇ ಇಲ್ಲ. ಹುಟ್ಟುತ್ತಲೇ ವಿಕಲಾಂಗ ಚೇತನೆಯಾಗಿ ಹುಟ್ಟಿದ್ದು ನನ್ನ ತಪ್ಪೇ..? ನನಗೂ ನೋವು ನಲಿವಿದೆ, ಹೇಳಿಕೊಳ್ಳಲು ಸಾಧ್ಯವಾಗದೇ ನನ್ನೊಳಗೆಯೇ ಹುದುಗಿ ಹೋಗುವ ಅವೆಷ್ಟೋ ಭಾವನೆಗಳಿವೆ. ಅವೆಲ್ಲವೂ ಅರ್ಥವಾಗುತ್ತಿದ್ದುದ್ದು ನನ್ನಪ್ಪನಿಗೆ ಮಾತ್ರ.. ಕೇವಲ ನನ್ನ ಕಣ್ಣುಗಳ ಭಾವ ಅರಿತು ನನ್ನ ಬೇಕು ಬೇಡಗಳನ್ನು ಪೂರೈಸುತ್ತಿದ್ದನೆಂದರೆ ಅಪ್ಪ ಅದೆಷ್ಟು ಜ್ಞಾನಿಯಾಗಿರಬೇಕು. ಅಪ್ಪ ಅದೆಂತಾ ಮಹಾನ್ ತ್ಯಾಗಮಯಿಯೆಂದರೆ ನನಗಾಗಿ ಕೇವಲ ನನಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ. ಅಜ್ಜಿ ಅಪ್ಪನಲ್ಲಿ ನನ್ನನ್ನು ಯಾವುದಾದರೂ ಅನಾಥಾಶ್ರಮದಲ್ಲಿ ಬಿಟ್ಟು ಇನ್ನೊಂದು ಮದುವೆಯಾಗಿ ಹಾಯಾಗಿರು ಮಗನೇ ಎನ್ನುವ ಮಾತು ಅದೆಷ್ಟು ಸಲ ಹೇಳಿದ್ದಳೋ ಕಾಣೆ. ಅಪ್ಪ ಸುತಾರಾಂ ಒಪ್ಪಿರಲಿಲ್ಲ. ಅಮ್ಮನ ಮೇಲಿಟ್ಟಿದ್ದ ನಿಷ್ಕಲ್ಮಶ ಪ್ರೀತಿ ಅಪ್ಪನನ್ನು ಕಟ್ಟಿ ಹಾಕಿತ್ತು.
” ತಮ್ಮಿಬ್ಬರ ಪ್ರೀತಿಯ ಫಲ ಇದು, ಎಂದಿಗೂ ದೂರ ಮಾಡಲಾರೆ” ಎಂದು ಅಜ್ಜಿಯ ಮಾತನ್ನು ಕಡೆಗಣಿಸಿ ನನ್ನ ಸೇವೆ ಮಾಡುತ್ತಾ ಬಂದ ನನ್ನಪ್ಪ. ಅಪ್ಪ ಪ್ರತಿದಿನ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮೊದಲು ನನ್ನ ಕೈ ಕಾಲುಗಳಿಗೆ ಎಣ್ಣೆ ಹಚ್ಚಿ ಮಸಾಜು ಮಾಡಿ ಸಣ್ಣ ಪುಟ್ಟ ವ್ಯಾಯಾಮ ಮಾಡಿಸಿ ನಿತ್ಯ ಕರ್ಮ ಸ್ನಾನ ಮುಗಿಸಿ ದೇವರ ಮನೆಗೆ ಕರೆದೊಯ್ದು ಹಣೆಗೆ ಕುಂಕುಮವಿಟ್ಟು ಮುತ್ತಿಡುವಾಗ ಅವನ ಕಣ್ಣಲ್ಲಿನ ಆ ಹೊಳಪು ನೋಡುವುದೇ ಸಂಭ್ರಮ ನನಗೆ. ಪ್ರೀತಿಯಿಂದ ತುತ್ತು ತಿನ್ನಿಸಿ ಮಲಗಿಸಿ ಹೋದರೆ ಮತ್ತೆ ಅಪ್ಪ ಕೆಲಸದಿಂದ ಮನೆಗೆ ಬರುವವರೆಗೂ ನಾಲ್ಕು ಗೋಡೆಗಳ ಮಧ್ಯದಲ್ಲೇ ಇರುತ್ತಿದ್ದ ನನ್ನನ್ನು ಸಂಜೆ ಮನೆಗೆ ಬಂದ ಕೂಡಲೇ ತನ್ನೆಲ್ಲ ಸುಸ್ತು ಸಂಕಟ ಮರೆತು ನಗು ನಗುತ್ತಾ ಹೆಗಲ ಮೇಲೆ ಹೊತ್ತು ಪಾರ್ಕಿಗೆ ಕರೆದುಕೊಂಡು ಹೋಗುವ.. ಅಲ್ಲಿ ಆಡುವ ಪುಟ್ಟ ಪುಟ್ಟ ಮಕ್ಕಳನ್ನು ಕಂಡು ನಾನೂ ಕೂಡಾ ಕೇಕೆ ಹಾಕಿ ನಗುವುದ ಕಂಡು ನನ್ನಪ್ಪನ ಕಣ್ಣಲ್ಲಿ ಆನಂದ ಭಾಷ್ಪ..

ದೇವರೇ ನನ್ನಪ್ಪನಲ್ಲಿ ಅದೆಷ್ಟು ಸಹನೆ ತುಂಬಿರುವೆ ನೀನು. ಎಷ್ಟೋ ಬಾರಿ ಊಟ ಮಾಡಿಸುವಾಗ ಬೇಡವೆಂದು ಉಗಿದದ್ದಿದೆ, ಕೋಪಗೊಂಡು ಅಪ್ಪನನ್ನು ಹೊಡೆದದ್ದಿದೆ, ಹಠ ಮಾಡಿದ್ದಿದೆ.. ಆದರೂ ನನ್ನೆಲ್ಲ ಚೇಷ್ಟೆಗಳನ್ನು ನಗು ನಗುತ್ತಲೇ ಸಹಿಸುವ ಅಪ್ಪನಿಗೇಕೆ ನನ್ನ ಮೇಲೆ ಇಂತಹ ಪ್ರೀತಿ. ಅಪ್ಪನ ಜೀವನ ನನ್ನಿಂದ ಹಾಳಾಗುತ್ತಿರುವುದು ನನಗೂ ಇಷ್ಟವಿಲ್ಲ.. ಅಪ್ಪ ಮತ್ತೊಂದು ಮದುವೆಯಾಗಿ ಸುಖವಾಗಿರುವುದನ್ನು ನಾನೂ ಕೂಡ ಬಯಸುವೆ. ಆದರೆ ಬರುವ ಹೊಸ ಅಮ್ಮ ನನಗೆ ಅಮ್ಮನಾಗುವಳೇ??
ಮೊನ್ನೆ ರಾಜಾರಾಮ್ ಅಂಕಲ್ ಫೋಟೋ ಜಾತಕದೊಂದಿಗೆ ಮನೆಗೆ ಬಂದವರು ಮತ್ತೆ ಅಪ್ಪನಲ್ಲಿ ಮದುವೆಯ ಪ್ರಸ್ತಾಪ ಮಾಡಿದ್ದರು. “ಹುಡುಗಿ ಚನ್ನಾಗಿದ್ದಾಳೆ, ನಿನಗೆ ಒಳ್ಳೆಯ ಜೋಡಿ ದಯವಿಟ್ಟು ಒಪ್ಪಿಕೊ ಮಗನೇ..” ಎಂದು ಅಜ್ಜಿ ಕೂಡ ದನಿ ಸೇರಿಸಿ ಅಪ್ಪನನ್ನು ಒತ್ತಾಯಿಸಿದ್ದರು. ಆದರೆ ಅಪ್ಪ ಒಂದೇ ಮಾತು ಹೇಳಿದ್ದರು..”ನೋಡಿ, ಬರುವ ಹೆಣ್ಣು ನನಗೆ ಹೆಂಡತಿಯಾಗಬಹುದು ಆದರೆ ನನ್ನ ಪಾಪುಗೆ ಅಮ್ಮ ಆಗಲಾರಳು. ಅಲ್ಲದೇ ನನ್ನನ್ನು, ನನ್ನ ಮಗಳನ್ನು ಬೇರೆ ಮಾಡಲಾರಳು ಎಂದೇನು ಭರವಸೆ? ದಯವಿಟ್ಟು ಮತ್ತೆ ಮದುವೆಯ ಮಾತು ಬೇಡ.. ನನ್ನ ಮಗಳು ನನಗೆ ದೇವರು ಕೊಟ್ಟ ವರ.. ಪುಣ್ಯವಂತರಿಗಷ್ಟೇ ಇಂತಹ ಮಕ್ಕಳ ಸೇವೆ ಮಾಡುವ ಸೌಭಾಗ್ಯ ಸಿಗುವುದು. ನನ್ನ ಮುದ್ದು ಮಗಳ ಸೇವೆಯಲ್ಲಿ ನನ್ನ ಜೀವನದ ಸಾರ್ಥಕತೆ ಕಾಣುವೆ.. ಇನ್ನೊಮ್ಮೆ ಒತ್ತಾಯಿಸಿದರೆ ನಾನು ನನ್ನ ಪಾಪು ಇಬ್ಬರೂ ಈ ಮನೆಯಲ್ಲಿ ಇರಲಾರೆವು” ಎಂದು ಕಡ್ಡಿ ತುಂಡರಿಸಿದಂತೆ ಹೇಳಿಬಿಟ್ಟಿದ್ದರು. ಅಪ್ಪನ ಮಾತು ಕೇಳಿ ನನ್ನ ಕಣ್ಣಲ್ಲಿ ನನಗರಿಯದೇ ಕಣ್ಣೀರು ಜಾರುತ್ತಿತ್ತು. ನನ್ನ ಕಣ್ಣೀರು ಕಂಡು ಓಡಿ ಬಂದು
“ಅಳಬೇಡ ಪಾಪು ನಿನ್ನನ್ನು ಬಿಟ್ಟು ನಾನೆಲ್ಲಿಗೂ ಹೋಗಲಾರೆ ಕಂದಾ” ಎಂದು ತಬ್ಬಿ ನುಡಿದ ನನ್ನಪ್ಪನ ಬಗ್ಗೆ ಹೆಮ್ಮೆ ಪಡಲೇ? ಅಥವಾ ಅವರ ಬಾಳಿಗೆ ನಾನೇ ಮುಳ್ಳಾಗಿದ್ದಕ್ಕೆ ದುಃಖ ಪಡಲೇ..?


