ವಿಜಯಪುರದ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಜರುಗಿದ ’ಬುತ್ತಿ ಜಾತ್ರೆ’
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಮಾಸವು ಒಂದು ವಿಶಿಷ್ಟವಾದ ಆಚರಣೆಯಾಗಿದೆ. ಈ ಮಾಸದಲ್ಲಿ ನಾವು ಪ್ರತಿದಿನವು ಶಿವ ಧ್ಯಾನ, ತಪಸ್ಸು, ಪ್ರಾರ್ಥನೆ, ದೇವರ ನಾಮಸ್ಮರಣೆ, ಪುರಾಣ, ಪ್ರವಚನ, ಕೀರ್ತನೆ ಮತ್ತು ಜೀವನ ಸಂದೇಶ ನೀಡುವ ಅಧ್ಯಾತ್ಮಿಕತೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೇವರನ್ನು ಭಕ್ತಿ-ಭಾವದಿಂದ ಪೂಜಿಸಿದರೆ ನಮ್ಮೆಲ್ಲ ಸಂಕಷ್ಟಗಳು ದೂರಾಗಲಿವೆ. ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಮತ್ತು ಸಾರ್ಥಕ ಬದುಕಿನ ಸತ್ಯವನ್ನು ಅರಿಯಲು ಮತ್ತು ಮನದಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಲು ಶ್ರಾವಣ ಮಾಸವು ಪ್ರಯೋಜನಕಾರಿ ಎಂದು ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಅವರು ನಗರದ ನವರಸಪುರದ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪುರಾಣ ಮಂಗಲ ಪ್ರಯುಕ್ತ ಜರುಗಿದ “ಬುತ್ತಿ ಜಾತ್ರೆ” ಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಯುವ ಜನಾಂಗ ಕ್ಕೆ ನಮ್ಮ ಧರ್ಮ, ಸಂಸ್ಕೃತಿ-ಸಂಸ್ಕಾರ, ಸಾಂಪ್ರದಾಯಿಕ ಪದ್ಧತಿ, ಆಚರಣೆಗಳ ಬಗ್ಗೆ ಅರಿವು ಮೂಡಿಸುವದು ಮತ್ತು ಸಮಾಜದಲ್ಲಿ ಭಾವೈಕ್ಯತೆ ಮತ್ತು ಸಾಮರಸ್ಯತೆಯನ್ನು ಮೂಡಿಸಲು ಈ ಬುತ್ತಿ ಜಾತ್ರೆಯಂತಹ ಉತ್ಸವಗಳು ಸಹಕಾರಿ ಎಂದರು.
ಸಾಂಸ್ಕೃತಿಕ ವೈಶಿಷ್ಯತೆ ಹೊಂದಿದ ಈ ಬುತ್ತಿ ಜಾತ್ರೆಯಲ್ಲಿ ನವರಸಪುರ ವಿವಿಧ ಬಡಾವಣೆಗಳಿಂದ ಮುತ್ತೈದೆಯರು ಸ್ವಯಂ ಸ್ಪೂರ್ತಿಯಿಂದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಹೋಳಿಗೆ, ಪಲ್ಲೆ, ಹುಳಬಾನ, ಹಿಂಡಿ ಮತ್ತು ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಿ, ಬಿಳಿ ಬಟ್ಟೆಯಲ್ಲಿ ಬುತ್ತಿ ಕಟ್ಟಿಕೊಂಡು ಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸಿದರು.
ನಂತರ ಬುತ್ತಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಸಂಜೆ ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು ಹಾಗೂ ಮಲ್ಲಿಕಾರ್ಜುನ ಹಿರೇಮಠ ಶಾಸ್ತ್ರಿಗಳೊಂದಿಗೆ ಲಕ್ಷ್ಮಿ ದೇವಸ್ಥಾನದಿಂದ ಶಿವಾಲಯಕ್ಕೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿತು.
ಈ ಬುತ್ತಿ ಜಾತ್ರೆಯಲ್ಲಿ ದೇವಾಲಯದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಉಪಾಧ್ಯಕ್ಷ ಶ್ರೀ ಭರಮಣ್ಣ ಕಡಕೋಳ, ಡಾ. ರಾಜಕುಮಾರ ಜೊಲ್ಲೆ, ಪ್ರೊ. ಬಿ.ವ್ಹಿ.ಕುಂಬಾರ, ರಾಜಶೇಖರ ಉಮರಾಣಿ, ಪ್ರೊ. ಎಂ.ಎಸ್.ಖೊದ್ನಾಪೂರ, ಅಲ್ಲಮಪ್ರಭು ಶಿರಹಟ್ಟಿ, ಬಸಯ್ಯ ಮಠಪತಿ, ಆರ್.ಎಸ್.ಕಪಾಳಿ, ಲಕ್ಷ್ಮಿ ದೇವಸ್ಥಾನದ ಅಧ್ಯಕ್ಷೆ ಶೋಭಾ ಚವ್ಹಾಣ, ಶಾಂತಾ ಕಪಾಳಿ, ಶ್ರೀಶೈಲ ಅವಜಿ, ಅರವಿಂದ ಹಂಗರಗಿ, ಆರ್.ಟಿ.ಉತ್ತರಕರ, ಸುರೇಶ ಹಲಕುಡೆ, ಮುಂಬೈನ ಪಂಡಿತ ಗಿರೀಶ ಸಾರವಾಡ, ಬಸವರಾಜ ಕುಂಬಾರ, ಶ್ರೀಶೈಲ ಬೀಳೂರ, ಆನಂದ ಕಡಕೋಳ, ಸುನೀಲ ಚವ್ಹಾಣ ಇನ್ನಿತರರು ಉಪಸ್ಥಿತರಿದ್ದರು.
ಗಾನ ತರಂಗ ಸಂಗೀತ ಶಾಲೆಯ ಶಿಕ್ಷಕ ಶ್ರೀಶೈಲ ಬೀಳೂರ, ಶ್ರೀ ಗಿರೀಶ ಸಾರವಾಡ, ಜಗದೀಶ ಅಳ್ಳಗಿ ಮುಂತಾದವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು.

