ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಚಿವ ಶಿವಾನಂದ ಪಾಟೀಲರಿಗೆ ಸನ್ಮಾನ
ವಿಜಯಪುರ: 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲಾ ಘಟಕ ಸಂಘಟಿಸಿ, ಮಾದರಿ ಸಮ್ಮೇಳನ ಮಾಡುವ ಮೂಲಕ ರಾಜ್ಯದ ಪತ್ರಕರ್ತರ ಪ್ರಶಂಸೆಗೆ ಪಾತ್ರವಾಗಿದ್ದು ಸ್ತುತ್ಯ ಕಾರ್ಯ ಎಂದು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಸಚಿವರ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು ನಾನಾ ಸಂಘ-ಸಂಸ್ಥೆಗಳ ಸಹಕಾರದಲ್ಲಿ ವಿಜಯಪುರ ಸಮ್ಮೇಳನ ಯಶಸ್ಸು ಕಂಡಿತು. ಇದಕ್ಕೆ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳ ದಣಿವರಿಯದ ಕಾರ್ಯವೂ ಕಾರಣವಾಗಿದೆ ಎಂದರು.
ಭವಿಷ್ಯದ ದಿನಗಳಲ್ಲಿ ಸಂಘ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಂಡರೆ, ಸಂಘದ ಚಟುವಟಿಕೆಗಳಿಗೆ ಕೈ ಜೋಡಿಸುವುದಾಗಿ ಸಚಿವರು ಭರವಸೆ ನೀಡಿದರು.
ಸಮ್ಮೇಳನದ ಸವಿನೆನಪಿಗಾಗಿ ಸಂಘ ಹೊರತಂದ ಪತ್ರಕರ್ತ ಸ್ಮರಣ ಸಂಚಿಕೆ ಮೇಲೆ ಕಣ್ಣಾಡಿಸಿದ ಸಚಿವರು, ಸ್ಮರಣ ಸಂಚಿಕೆಯನ್ನು ಕೊಂಡಾಡಿದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ್ ಆಪ್ಟೆ, ರಾಜ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ.ಕೆ. ಕುಲಕರ್ಣಿ, ಸಂಘದ ಕಾರ್ಯಕಾರಿಣಿ ಸದಸ್ಯರಾದ ಶಶಿಕಾಂತ ಮೆಂಡೇಗಾರ, ಗುರುರಾಜ್ ಗದ್ದನಕೇರಿ, ಬಸವರಾಜ ಉಳ್ಳಾಗಡ್ಡಿ, ಗುರುರಾಜ್ ಲೋಕುರೆ, ಸುನೀಲ ಗೋಡೆನ್ನವರ, ಸುನೀಲ ಕಾಂಬಳೆ, ಹಿರಿಯ ಪತ್ರಕರ್ತರಾದ ರಫಿ ಭಂಡಾರಿ, ಅಶೋಕ ಯಡಳ್ಳಿ ಸೇರಿದಂತೆ ಸಂಘದ ಸದಸ್ಯರಿದ್ದರು.