ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು | ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲು ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್.ಎಂ.ಮಾಳಿ
ವಿಜಯಪುರ: ಒಂದೇ ಬಸ್ಸಿನಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ತಾಲೂಕು ಕೇಂದ್ರಕ್ಕೆ ತೆರಳಲು ತೊಂದರೆಯಾಗುತ್ತಿದ್ದು, ಹೆಚ್ಚುವರಿ ಬಸ್ ಓಡಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.
ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದಿಂದ ಚಡಚಣ ಪಟ್ಟಣಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಹೆಚ್ಚಾಗಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ತುಂಬಿದ್ದರಿಂದ ಹಲವಾರು ವಿದ್ಯಾರ್ಥಿಗಳು ಬಸ್ ಹತ್ತಲು ಸಾಧ್ಯವಾಗದಂತಾಗಿದೆ.
ಪ್ರತಿನಿತ್ಯ ಚಡಚಣ ಪಟ್ಟಣದಿಂದ ಗಡಿಭಾಗದಲ್ಲಿರುವ ಹಾಲಳ್ಳಿ, ಶಿರಾಡೋಣ, ರೇವತಗಾಂವ, ಉಮರಜ ಹಾಗೂ ದಸೂರ ಮಾರ್ಗವಾಗಿ ಓಡಾಡುವ ಸಾರಿಗೆ ಬಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಹೀಗಾಗಿ ಈಗಾಗಲೇ ಹಾಲಳ್ಳಿ ಮತ್ತು ಶಿರಾಡೋಣ ಗ್ರಾಮಕ್ಕೆ ಹೆಚ್ಚುವರಿ ಬಸ್ಸೊಂದನ್ನು ಓಡಿಸಲಾಗುತ್ತಿದೆ. ಇನ್ನುಳಿದ ಉಮರಜ, ದಸೂರ ಹಾಗೂ ರೇವತಗಾಂವ ಗ್ರಾಮಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಸವಲತ್ತು ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಒಂದೇ ಬಸ್ಸಿನಲ್ಲಿ ಜೋತು ಬಿದ್ದು ಹೋಗುವ ಪ್ರಸಂಗ ನಡೆದಿದೆ.
ಒಂದು ಬಸ್‌ನಲ್ಲಿ ಕೇವಲ ೫೨ ಜನ ಪ್ರಯಾಣಿಸಬೇಕು. ಆದರೆ ಇಲ್ಲಿ ಈಗ ೧೨೦ಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದಾರೆ. ಇದರಿಂದ ವಯೋವೃದ್ಧರಿಗೆ, ಮಹಿಳೆಯರಿಗೆ, ವಿಶೇಷ ಚೇತನರಿಗೆ, ವಿದ್ಯಾರ್ಥಿನಿಯರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಾರಿಗೆ ಅಧಿಕಾರಿಗಳು ಕೂಡಲೇ ಚಡಚಣ ಪಟ್ಟಣದಿಂದ ರೇವತಗಾಂವ ಗ್ರಾಮಕ್ಕೆ ಪ್ರತಿದಿನ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
“ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಹೆಚ್ಚುವರಿ ಬಸ್ ಓಡಿಸುತ್ತಿಲ್ಲ. ನಿತ್ಯ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವ ದುಸ್ಥಿತಿ ಎದುರಾಗಿದೆ. ಕಾರಣ ಚಡಚಣ ತಾಲೂಕು ಕೇಂದ್ರದಿಂದ ರೇವತಗಾಂವ ಗ್ರಾಮಕ್ಕೆ ಹೆಚ್ಚುವರಿ ಬಸ್ ಓಡಿಸಬೇಕು.”
– ತೇಜಶ್ವಿನಿ ಮಾಳಿ
ವಿದ್ಯಾರ್ಥಿನಿ

