ಹೊಸ ಪಠ್ಯಕ್ರಮ ತರಬೇತಿ ಕಾರ್ಯಕ್ರಮದಲ್ಲಿ ಡಯಟ್ ಪ್ರಾಚಾರ್ಯೆ ಎಸ್.ಎ. ಮುಜಾವರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಆಗುತ್ತಿರುವ ಬದಲಾವಣೆಗಳಿಗೆ ಶಿಕ್ಷಕರು ಹೊಂದಿಕೊಳ್ಳುವುದರ ಜೊತೆಗೆ, ಹೊಸ ಪಠ್ಯಕ್ರಮದ ಕ್ಲಿಷ್ಟತೆ ಹಾಗೂ ಕಠಿಣತೆಯನ್ನು ಅರ್ಥಮಾಡಿಕೊಂಡು ಪರಿಣಾಮಕಾರಿಯಾಗಿ ಬೋಧಿಸುವ ಸಿದ್ಧತೆ ಹೊಂದಬೇಕು ಎಂದು ಡಯಟ್ ಪ್ರಾಚಾರ್ಯೆ ಎಸ್.ಎ. ಮುಜಾವರ ಹೇಳಿದರು.
ನಿಡಗುಂದಿಯ ಕಮದಾಳ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಿಡಗುಂದಿ ತಾಲ್ಲೂಕಿನ ಶಿಕ್ಷಕರಿಗಾಗಿ ವಿಜ್ಞಾನ ಹಾಗೂ ಗಣಿತ ವಿಷಯದ ಹೊಸ ಪಠ್ಯಕ್ರಮ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.
೬, ೭ ಮತ್ತು ೮ನೇ ತರಗತಿಗಳ ಪಠ್ಯಕ್ರಮದಲ್ಲಿ ಆಗಿರುವ ಬದಲಾವಣೆಗಳನ್ನು ಶಿಕ್ಷಕರು ಸಮಗ್ರವಾಗಿ ಅರಿತುಕೊಳ್ಳಬೇಕು. ಕೇಂದ್ರದ ಎನ್ ಸಿ ಇಆರ್ ಟಿ ಪಠ್ಯಕ್ರಮ ಆಧಾರದಲ್ಲಿಯೇ ಈ ರಾಜ್ಯ ಪಠ್ಯಕ್ರಮವಿದೆ. ಮೊದಲಿನಂತೆ ಸಾಂಪ್ರದಾಯಿಕವಾಗಿ ಬೋಧಿಸಲು ಅಸಾಧ್ಯ, ವಿದ್ಯಾರ್ಥಿಗಳ ಕಲಿಕೆಯನ್ನು ಜೀವನದ ನಿತ್ಯದ ಚಟುವಟಿಕೆಗಳಿಗೆ ಅನ್ವಯಿಸುವಂತೆ ಮಾಡುವುದು ಇಂದಿನ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದರು.
ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ವಿಜ್ಞಾನ ವಿಷಯವನ್ನು ವಿದ್ಯಾರ್ಥಿಗಳ ದಿನನಿತ್ಯದ ಅನುಭವಗಳೊಂದಿಗೆ ಬೆಸೆಯಬೇಕು. ಪಠ್ಯಕ್ರಮದ ಕ್ಲಿಷ್ಟತೆ ಮತ್ತು ಕಠಿಣತೆಯನ್ನು ಸರಳ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬೋಧಿಸುವ ಕೌಶಲ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಡಯಟ್ ಹಿರಿಯ ಉಪನ್ಯಾಸಕಿ ಗೀತಾ ಕುಲಕರ್ಣಿ, ಎಂ.ವಿ. ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಸುನಿಲ ನಾಯಕ, ಸಂಪನ್ಮೂಲ ವ್ಯಕ್ತಿ ವಿಜಯೇಂದ್ರ ಪುರೋಹಿತ, ಬಿ.ಎಸ್. ಅವಟಿ, ತಸ್ಲೀಮ್ ಮಕಾನದಾರ್, ಭಾರತಿ ಪಾಟೀಲ, ಸುರೇಶ ಹುರಕಡ್ಲಿ, ಎಸ್.ಎಸ್. ಕಾರಕೂನ, ಎಸ್.ಎಂ. ಕಮತಗಿ, ಪ್ರಕಾಶ ದೋರನಳ್ಳಿ, ಶಿಕ್ಷಕ ಸಂಘಟನೆಯ ಅಧ್ಯಕ್ಷ ಸಲೀಂ ದಡೆದ, ಎಂ.ಎಂ. ಮುಲ್ಲಾ ಇದ್ದರು.

