ಜಮ್ಮಲದಿನ್ನಿ ಕ್ರಾಸ್ ಬಳಿ ನಡೆದ | ಘಟನೆ ಪತ್ನಿಗೆ ಗಂಭೀರ ಗಾಯ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ರಸ್ತೆ ಬದಿಯಲ್ಲಿ ಯಾವುದೇ ಮುನ್ಸೂಚನೆ, ಇಂಡಿಕೇಟರ್ ಅಥವಾ ಸಿಗ್ನಲ್ ಇಲ್ಲದೆ ನಿಲ್ಲಿಸಿದ್ದ ಟಿಪ್ಪರ್ ವಾಹನಕ್ಕೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಪತ್ನಿಗೆ ಗಂಭೀರ ಗಾಯಗಳಾದ ಘಟನೆ ಬುಧವಾರಂದು ಮದ್ಯಾಹ್ನ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜಮ್ಮಲದಿನ್ನಿ ಕ್ರಾಸ್ ಬಳಿ ನಡೆದಿದೆ.
ಮೃತನನ್ನು ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದ ಲಾಲಸಾಬ ಚಂದಾಸಾಬ ಗೋಗಿ (೪೦) ಎಂದು ಗುರುತಿಸಲಾಗಿದೆ. ಅವರ ಪತ್ನಿ ಆಸ್ಮಾ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಲಸಾಬ ಹಾಗೂ ಅವರ ಪತ್ನಿ ಆಸ್ಮಾ ಅವರು ತಮ್ಮ ಮಗನನ್ನು ಭೇಟಿಯಾಗಲು ಇಣಚಗಲ್‌ನ ಅಲ್ಪಸಂಖ್ಯಾತರ ಶಾಲೆಗೆ ಕೆಎ-೨೮, ಎಚ್‌ಜೆ-೮೧೭೦ ಸಂಖ್ಯೆಯ ಹೋಂಡಾ ಶೈನ್ ಬೈಕ್‌ನಲ್ಲಿ ತಾಳಿಕೋಟೆಯಿಂದ ಮುದ್ದೇಬಿಹಾಳ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಜಮ್ಮಲದಿನ್ನಿ ಕ್ರಾಸ್ ಸಮೀಪ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಕೆಎ-೩೬, ಸಿ-೧೨೪೭ ಸಂಖ್ಯೆಯ ಅಶೋಕ ಲೇಲ್ಯಾಂಡ್ ಟಿಪ್ಪರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಬೈಕ್ ಸವಾರ ಲಾಲಸಾಬ ಅವರಿಗೆ ತಲೆ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್‌ನ ಹಿಂಬದಿ ಕುಳಿತಿದ್ದ ಪತ್ನಿ ಆಸ್ಮಾ ಅವರ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ತಲೆಗೆ ಒಳಪೆಟ್ಟಾಗಿದೆ.
ಈ ಕುರಿತು ಟಿಪ್ಪರ್ ಚಾಲಕ ರಸ್ತೆ ಮೇಲೆ ವಾಹನವನ್ನು ಯಾವುದೇ ನಿಲುಗಡೆ ಸೂಚನೆ, ಇಂಡಿಕೇಟರ್ ಅಥವಾ ಮುನ್ಸೂಚನೆ ಇಲ್ಲದೆ ನಿಲ್ಲಿಸಿದ್ದರಿಂದ ಬೈಕ್ ಸವಾರ ಅಜಾಗುರುಕತೆಯಿಂದ ಅತೀ ವೇಗದ ರೀತಿಯಲ್ಲಿ ಬೈಕ್ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಮೃತನ ಸಹೋದರ ಅಲ್ಲಾಭಕ್ಷ ಚಂದಾಸಾಬ ಗೋಗಿ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಮಹ್ಮದಪಸಿಉದ್ದೀನ್, ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರು ಭೇಟಿ ನೀಡಿದ್ದು ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

