ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಸಾಲಿನಲ್ಲಿ ಬಾಲಕರಿಗಾಗಿ ಹೊಯ್ಸಳ, ಬಾಲಕಿಯರಿಗಾಗಿ ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಅರ್ಹ ಮಕ್ಕಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅಸಾಧಾರಣ ಸಾಧನೆಗೈದ ೫ ರಿಂದ ೧೮ ವರ್ಷದೊಳಗಿನ ಜಿಲ್ಲೆಯ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುವುದು. ನಾವೀನ್ಯತೆ, ತಾರ್ಕಿಕ ಸಾಧನೆಗಳು, ಕ್ರೀಡೆ ಹಾಗೂ ಕಲೆ, ಸಾಂಸ್ಕೃತಿಕ ಮತ್ತು ಸಂಗೀತ. ಈ ನಾಲ್ಕು ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿದ ತಲಾ ಇಬ್ಬರು ಮಕ್ಕಳಂತೆ ಜಿಲ್ಲೆಯಲ್ಲಿ ಒಟ್ಟು ೮ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಶಸ್ತಿ ವಿಜೇತ ಪ್ರತಿಯೊಬ್ಬ ಮಗುವಿಗೆ ತಲಾ ೧೦ ಸಾವಿರ ರೂ. ಗಳ ನಗದು ಬಹುಮಾನ ನೀಡಿ ಗೌರವಿಸಲಾಗುವುದು.ಅರ್ಹ ಮಕ್ಕಳು ಅರ್ಹ ಮಕ್ಕಳು ನಗರದ ಗಾಂಧಿ ಭವನದ ಎದುರಿಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆ. ೩೦ ಕೊನೆಯ ದಿನವಾಗಿದೆ.
ಅರ್ಜಿಗಳನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ಭರ್ತಿ ಮಾಡಿ ಸಲ್ಲಿಸಬೇಕಾಗಿದ್ದು, ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
