ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮದ ಆರಾಧ್ಯ ದೈವ ಪವಾಡ ಬಸವೇಶ್ವರರ ಬೆಲೆಬಾಳುವ ಬೆಳ್ಳಿ ಮೂರ್ತಿ ಕದ್ದ ಪ್ರಕರಣದಲ್ಲಿ ಕರ್ತವ್ಯ ನಿಷ್ಠೆ ಮೆರೆದ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಅವರನ್ನು ಚಕ್ರವರ್ತಿ ನ್ಯೂಸ್ ತಂಡದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ನ್ಯೂಸ್ ನ ಸಂಪಾದಕ ಹಾಗೂ ನ್ಯಾಯವಾದಿ ಚೇತನ ಶಿವಶಿಂಪಿ ಮಾತನಾಡಿ, ಕಳ್ಳತನ ನಡೆದ ನಂತರ ದೂರು ದಾಖಲಿಸಿಕೊಂಡು ಸುಮ್ಮನಾಗದೆ, ಪ್ರಕರಣದ ಪ್ರತಿಯೊಂದು ಸುಳಿವನ್ನೂ ಗಂಭೀರವಾಗಿ ಪರಿಗಣಿಸಿ, ತಾಂತ್ರಿಕ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ನಡೆಸಿ ಆರೋಪಿಗಳ ಜಾಡು ಹಿಡಿಯುವಲ್ಲಿ ಪಿಎಸ್‌ಐ ಹಾಗೂ ಅವರ ತಂಡ ಯಶಸ್ವಿಯಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪೊಲೀಸ್ ಠಾಣೆಯ ಬಾಗಿಲು ತಟ್ಟುವ ಪ್ರತಿಯೊಬ್ಬ ಸಂತ್ರಸ್ತನಿಗೂ ನ್ಯಾಯ ಸಿಗಬೇಕು ಎಂಬ ಕಾಳಜಿಯಿಂದ ಪೊಲೀಸರು ಕಾರ್ಯನಿರ್ವಹಿಸಿದಾಗ ಮಾತ್ರ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಆಶಯ ಸಾಕಾರಗೊಳ್ಳುತ್ತದೆ. ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನಿನ ಮುಂದೆ ನಿಲ್ಲಿಸುವ ಪೊಲೀಸರ ಪ್ರತಿಯೊಂದು ಯಶಸ್ಸು ಕೇವಲ ಇಲಾಖೆಯ ಸಾಧನೆಯಲ್ಲ, ಅದು ಸಮಾಜದಲ್ಲಿ ಕಾನೂನಿನ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸುವ ಸಾಧನೆಯಾಗಿದೆ ಎಂದರು.
ತಪ್ಪಾದಾಗ ಪೊಲೀಸರನ್ನು ಟೀಕಿಸುವ ಸಮಾಜ, ಉತ್ತಮ ಕೆಲಸ ಮಾಡಿದಾಗ ಅದೇ ಪೊಲೀಸರ ಬೆನ್ನುತಟ್ಟಿ ಪ್ರೋತ್ಸಾಹಿಸುವ ದೊಡ್ಡತನವನ್ನೂ ತೋರಬೇಕು. ಎಷ್ಟೋ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ತೆಗಳುವುದನ್ನು ನಾವು ನೋಡಿದ್ದೇವೆ. ಆದರೆ ಕಳ್ಳತನ ಪ್ರಕರಣವನ್ನು ದಕ್ಷತೆಯಿಂದ ಭೇದಿಸಿದ ಪಿಎಸ್‌ಐ ಸಂಜಯ ತಿಪರೆಡ್ಡಿ ಅವರ ಕರ್ತವ್ಯನಿಷ್ಠೆಗೆ ಇಡೀ ತಾಲೂಕು ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿರುವುದು ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ವಿಶ್ವಾಸಕ್ಕೆ ಉತ್ತಮ ನಿದರ್ಶನವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಸಂಜೀವ ತಿಪರೆಡ್ಡಿ ಅವರು ಮಾತನಾಡಿ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ವಿಶ್ವಾಸವೇ ಅಪರಾಧ ನಿಯಂತ್ರಣದ ದೊಡ್ಡ ಶಕ್ತಿ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು. ಜನರ ಸಹಕಾರವಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ನನ್ನ ಜವಾಬ್ದಾರಿಗೆ ನಿಭಾಯಿಸಿದ್ದಕ್ಕೆ ತಾಲೂಕಿನ ಜನತೆ ನನ್ನನ್ನು ಗೌರವಿಸಿದ್ದಕ್ಕೆ ಸದಾ ಆಭಾರಿಯಾಗಿರುತ್ತೇನೆ ಎಂದರು.
ಈ ವೇಳೆ ಉಪಸಂಪಾದಕ ನಾಗೇಂದ್ರ ಶಿವಶಿಂಪಿ, ವರದಿಗಾರರಾದ ವಿಕ್ರಂ ಬಿರಾದಾರ, ರಫೀಕ ಬೀಳಗಿ, ವಿಜಯ ಸೋನಾರ ಇದ್ದರು.

