ವಿಜಯಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಡಾ. ಗಂಗಾಧರ ಸಂಬಣ್ಣಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳು ಅತ್ಯಂತ ಪೂರಕವಾಗಿವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಗಂಗಾಧರ ಎಸ್. ಸಂಬಣ್ಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೨೦೨೬-೨೭ನೇ ಸಾಲಿನ ವಿಜಯಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದ ಯುವಕ-ಯುವತಿಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸದೃಢ ದೇಹವನ್ನು ಹೊಂದುವುದರ ಮೂಲಕ, ಬಲಶಾಲಿ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಭಾರತ ಸರ್ಕಾರದ ರಾಷ್ಟ್ರೀಯ ವಚನ ಸಮಿತಿ ಸದಸ್ಯ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವೀದ್ ಎಂ. ಜಮಾದಾರ್ ಅಧ್ಯಕ್ಷತೆ ವಹಿಸಿ, ಪ್ರತಿಯೊಬ್ಬ ಕ್ರೀಡಾಪಟುವು ಕ್ರೀಡೆಯಲ್ಲಿ ನಿರಂತರವಾಗಿ ಭಾಗವಹಿಸಿ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವ ಮೂಲಕ ದೇಶದ ಹೆಸರನ್ನು ಉತ್ತುಂಗಕ್ಕೆ ಒಯ್ಯಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ್ ದೈವಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ್ ಜೋಶಿ ನಿರೂಪಿಸಿ, ವಂದಿಸಿದರು.
ವೇದಿಕೆಯಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸಂಜೀವ್ ಸಿ. ಖೋತ್, ಸಂತೋಷ್ ಕುಮಾರ್ ಎಸ್. ನಿಗಡಿ, ನ್ಯಾಯವಾದಿಗಳಾದ ನಾಗರಾಜ್ ಪಿ. ಲಂಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ್ ಬೋವಿ ಹಾಗೂ ಇಲಾಖಾ ಅಧೀಕ್ಷಕಿ ಪ್ರಿಯಾಂಕ ಜಿ. ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿಂದ ಆಗಮಿಸಿದ ತೀರ್ಪುಗಾರರು, ದೈಹಿಕ ಶಿಕ್ಷಣ ಶಿಕ್ಷಕರು, ಇಲಾಖೆಯ ತರಬೇತುದಾರರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

