ದೇವರಹಿಪ್ಪರಗಿಯ ಐತಿಹಾಸಿಕ ರಾವುತರಾಯ ಮಲ್ಲಯ್ಯ ಜಾತ್ರಾಮಹೋತ್ಸವ
ದೇವರಹಿಪ್ಪರಗಿ: ಐತಿಹಾಸಿಕ ರಾವುತರಾಯ ಮಲ್ಲಯ್ಯ ಜಾತ್ರಾ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯು ಅನ್ನದಾಸೋಹ ಏರ್ಪಡಿಸುವುದರ ಮೂಲಕ ಪಟ್ಟಣದ ವಿವಿಧ ಗೆಳೆಯರ ಬಳಗಗಳು ಭಕ್ತರ ಪ್ರಸಾದ ಸೇವೆಯಲ್ಲಿ ನಿರತವಾಗಿವೆ.
ಪಟ್ಟಣದ ರಾವುತರಾಯ ಮಲ್ಲಯ್ಯ ಜಾತ್ರೆಯ ೪ನೇ ದಿನದ ಸಕ್ಕರೆ ಲೋಬಾನ ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷ ನೆರೆಯ ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಊಟ ಹಾಗೂ ಉಪಹಾರದ ಅನುಕೂಲತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿವರ್ಷ ವಿವಿಧ ಗೆಳೆಯರ ಬಳಗಗಳು ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಿ ತಮ್ಮದೇಯಾದ ಸೇವೆಯಲ್ಲಿ ನಿರತವಾಗಿವೆ.
ಗೆಳೆಯರ ಬಳಗ ಕಳೆದ ೧೦ ವರ್ಷಗಳಿಂದ ಆರಂಭಿಸಿದ ದಾಸೋಹ ವ್ಯವಸ್ಥೆಯಲ್ಲಿ ಪಟ್ಟಣದ ವ್ಯಾಪಾರಸ್ಥರು, ವೈದ್ಯರು, ರೈತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಎಲ್ಲ ಸಮುದಾಯಗಳಿಗೆ ಸೇರಿದ ಯುವಕರು ಪಾಲ್ಗೊಳ್ಳುವುದು ವಿಶೇಷವಾಗಿದೆ. ಬೆಳಿಗ್ಗೆ ಬೇಗ ಪ್ರಸಾದವನ್ನು ತಯಾರಿಸಿ ದೇವರಿಗೆ ನೈವಿಧ್ಯ ಅರ್ಪಿಸಿ ನಂತರ ದಾಸೋಹ ಸೇವೆ ಪ್ರಾರಂಭಿಸಲಾಗುತ್ತದೆ. ಒಂದು ಕಡೆ ಶಿರಾ,ಉಪ್ಪಿಟ್ಟು ಉಪಹಾರದ ವ್ಯವಸ್ಥೆ ಇದ್ದರೇ, ಇನ್ನೋಂದೆಡೆ ಸಜ್ಜಿಗೆ, ಅನ್ನ, ಸಾಂಬಾರ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಹೀಗೆ ವಿವಿಧೆಡೆಗಳಲ್ಲಿ ದಾಸೋಹ ತಂಡಗಳು ಬೆಳಿಗ್ಗೆಯಿಂದ ಭಕ್ತರನ್ನು ಆಹ್ವಾನಿಸುವುದು, ಬಿಸಿಬಿಸಿ ಅಡಿಗೆ ಬಡಿಸುವುದು, ನೀರಿನ ವ್ಯವಸ್ಥೆ ಕಲ್ಪಿಸಿ ಭಕ್ತರಿಗೆ ನೆರವಾಗುತ್ತಿವೆ.
ದಾಸೋಹದಲ್ಲಿ ರಾಜು ಗುತ್ತೇದಾರ, ಬಂಡೆಪ್ಪ ಬಿರಾದಾರ(ದಿಂಡವಾರ), ಡಾ.ಆರ್.ಆರ್.ನಾಯಿಕ್. ಮಲ್ಲಪ್ಪ ಭತಗುಣಕಿ, ಕೆ.ಎಸ್.ಕೋರಿ, ವಿನೋದ ಪಾಟೀಲ, ರಮೇಶ ಮಾಳನೂರ, ಸೋಮು ಹಿರೇಮಠ, ಆನಂದ ಜಡಿಮಠ, ಸೋಮು ಹಡಪದ, ಅಪ್ಪು ಪಾಟೀಲ, ಮಹಾದೇವ ಮಣೂರ, ಮಂಜು ಒಂಟೆತ್ತಿನ್, ಶ್ರೀನಿವಾಸ ಕುಲಕರ್ಣಿ, ಕಾಶೀನಾಥ ಸರೂರ, ರಮೇಶ ಯರನಾಳ, ದೊಡ್ಡಪ್ಪ ಯರಗಲ್, ಕಾಸುಗೌಡ ಜಿರ್ಲಿ, ಪ್ರಭು ಸಣ್ಣಕ್ಕಿ ಸೇರಿದಂತೆ ಪ್ರಮುಖರು ನೇತೃತ್ವ ವಹಿಸಿದ್ದರು.