೫೦ನೇ ಕರ್ನಾಟಕ ಸಂಭ್ರಮ ಹಿನ್ನಲೆ
ಕನ್ನಡ ಕಾರ್ಯಗಳಿಗೆ ಕೈಜೋಡಿಸಿ ರಾಜ್ಯೋತ್ಸವ ವಿಶೇಷವಾಗಿಸಿ
ವಿಜಯಪುರ: ನಗರದ ಎಲ್ಲಾ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಮೂಲಕ ಕನ್ನಡತನ ಮೆರೆಯಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು.
ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ೫೦ನೇ ಕರ್ನಾಟಕ ಸಂಭ್ರಮ ಹಿನ್ನೆಲೆಯಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸುವ ಕುರಿತು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಮತ್ತು ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ನವಂಬರ್ ೧ರಿಂದ ಎಲ್ಲರೂ ಕಡ್ಡಾಯವಾಗಿ ಕನ್ನಡ ನಾಮ ಫಲಕ ಅಳವಡಿಸಿ ೫೦ನೇ ಕರ್ನಾಟಕದ ಸಂಭ್ರಮ ಆಚರಣೆ ಮಾಡಲು ಆ ದಿನದಂದು ಕನ್ನಡಮಯ ವಾತಾವರಣದಿಂದ ಅಂಗಡಿ ಮುಂಗಟ್ಟುಗಳನ್ನು ಶೃಂಗರಿಸಿ ಸಾಯಂಕಾಲ ದೀಪ (ಹಣತೆ) ಗಳನ್ನು ಬೆಳಗಿಸಲು ಮನವಿ ಮಾಡಿದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ, ಜಿಲ್ಲಾಡಳಿತದ ಮೂಲಕ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆಯೂ ಹಾಗೂ ಸಂಬಂಧಪಟ್ಟ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಕನ್ನಡಾಭಿಮಾನ ಮೆರೆಯುವ ಮೂಲಕ ವಿಶೇಷ ರಾಜ್ಯೋತ್ಸವ ಆಚರಣೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಅರಿವು ಮೂಡಿಸುವ ಜಾಗೃತಿ ಜಾಥಾ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ ವೃತ್ತದವರೆಗೂ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಬದ್ರುದ್ದಿನ್ ಸೌದಾಗರ್ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರು, ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು ಕನ್ನಡ ನಾಮ ಫಲಕಗಳ ಬಗ್ಗೆ ಅರಿವು ಮೂಡಿಸಿದರು