ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳು ಬಾಲ್ಯದಲ್ಲಿ ತಪ್ಪು ಮಾಡಿದಾಗ ಶಿಕ್ಷಕರು, ಪಾಲಕರು ಅವರನ್ನು ಬುದ್ದಿ ಮಾತುಗಳ ಮೂಲಕ ತಿದ್ದಿ ಸರಿಯಾದ ದಾರಿಗೆ ತರಬಹುದಾಗಿದೆ ಎಂದು ಮುಖ್ಯಶಿಕ್ಷಕ ಅಶೋಕ ಹೊಸಗೌಡ್ರ ಹೇಳಿದರು.
ತಾಲ್ಲೂಕಿನ ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಜರುಗಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಾಸ್ಥö್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ದುಶ್ಚಟಗಳನ್ನು ತಡೆಯುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅಗತ್ಯವಾಗಿವೆ. ಸರ್ಕಾರ ಮಾಡದ ಜಾಗೃತಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ಅಬ್ದುಲ್ ರಜಾಕ್ ನದಾಫ್ ಮಾತನಾಡಿ, ಧೂಮ್ರಪಾನ, ಮಧ್ಯಪಾನ, ಮೊಬೈಲ್, ಬಳಕೆಗಳಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸಿ, ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡದರು.
ವಲಯ ಮೇಲ್ವಿಚಾರಕಿ ಸವಿತಾ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯಲ್ಲಿ ನಡೆಯುವ ಕಾರ್ಯಕ್ರಮಗಳು ಸೇರಿದಂತೆ ಶಾಲೆಗೆ ಡೆಸ್ಕ್ ಬೆಂಚ್ ವಿತರಣೆ, ನಿರ್ಗತಿಕರ ಮಾಶಾಸನ, ನಮ್ಮೂರು ನಮ್ಮ ಕೆರೆ ಹಾಗೂ ಶುದ್ಧ ನೀರು ಘಟಕ ಹೀಗೆ ಹಲವುಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಸಿಬ್ಬಂದಿ ಎಮ್.ಎಸ್.ಬಗಲಿ, ಬಿ.ಎಸ್.ಅಗಸಬಾಳ, ಸುನೀತಾ ಕೆ. ಬಸವರಾಜ ಕಮತರ, ಎಸ್.ಎಸ್.ಮಲ್ಲೇದ, ಜಿ.ಆರ್.ಕುಂಬಾರ, ಎನ್.ಬಿ.ಬಿರಾದಾರ, ಸೇವಾಪ್ರತಿನಿಧಿಗಳಾದ ಪ್ರೀಯಾಂಕ, ಶ್ರೀಗೌರಿ , ಗೌರವ ಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

