ಉದಯರಶ್ಮಿ ದಿನಪತ್ರಿಕೆ
ಅಥಣಿ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,43,842 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಶೇ.100ರಷ್ಟು ಫಾರ್ಮ್ ವಿತರಣೆ ಹಾಗೂ ಸಂಗ್ರಹಣೆ ಕಾರ್ಯ ಪೂರ್ಣಗೊಂಡಿದೆ. ಈ ಪೈಕಿ 2,23,002 ಫಾರ್ಮ್‌ಗಳನ್ನು (91.45%) ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅಥಣಿ ತಾಲೂಕು ದಂಡಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಸಿದರಾಯ ಭೋಸಗಿ ತಿಳಿಸಿದ್ದಾರೆ.
ಅವರು ಪಟ್ಟಣದ ತಾಲೂಕಾ ಆಡಳಿತ ಸೌದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,31,096 ಮತದಾರರು ಇದ್ದು, ಜೂನ್ 30ರಿಂದ ಆಗಸ್ಟ್ 17ರವರೆಗೆ ಎನ್ಯೂಮರೇಷನ್ ಫಾರ್ಮ್ ವಿತರಣೆ ಮತ್ತು ಸಂಗ್ರಹಣೆ ಕಾರ್ಯ ನಡೆಯಿತು. ಡಿಜಿಟಲೀಕರಣಗೊಂಡ ಮಾಹಿತಿಯ ಪರಿಶೀಲನೆಯಲ್ಲಿ 20,840 ಪ್ರಕರಣಗಳು ASDD ಪಟ್ಟಿಯಲ್ಲಿ ದಾಖಲಾಗಿವೆ.
ಇದೇ ವೇಳೆ, ಪರಿಶೀಲನಾ ಪ್ರಕ್ರಿಯೆಯಲ್ಲಿ 1,232 ಗೈರು ಮತದಾರರು, 10,668 ಶಾಶ್ವತವಾಗಿ ವಲಸೆ ಹೋದ ಮತದಾರರು, 5,561 ಮೃತ ಮತದಾರರು ಹಾಗೂ 3,376 ಪುನರಾವರ್ತಿತ ಮತದಾರರು ಎಂದು ಗುರುತಿಸಲಾಗಿದೆ. ಇತರ ಕಾರಣಗಳಿಗೆ ಸಂಬಂಧಿಸಿದಂತೆ 3 ಪ್ರಕರಣಗಳು ದಾಖಲಾಗಿವೆ.
ಮತದಾರರ ಮಾಹಿತಿಯ ಪರಿಶೀಲನೆಯಲ್ಲಿ 2,501 ಲಾಜಿಕಲ್ ಎರರ್ಸ್ ಹಾಗೂ 1,419 ನೋ-ಲಿಂಕೇಜ್ ಪ್ರಕರಣಗಳು ಸೇರಿದಂತೆ ಒಟ್ಟು 3,920 ಪ್ರಕರಣಗಳು ಪತ್ತೆಯಾಗಿದ್ದು, ಇವುಗಳ ಕುರಿತು ಅಗತ್ಯ ಪರಿಶೀಲನೆ ಹಾಗೂ ತಿದ್ದುಪಡಿ ಕ್ರಮ ಕೈಗೊಳ್ಳಲಾಗುತ್ತಿದೆ.
ಮತದಾರರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಸಲ್ಲಿಕೆಯಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಅಕ್ಟೋಬರ್ 22ರವರೆಗೆ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ಸಿದರಾಯ ಭೋಸಗಿ ತಿಳಿಸಿದ್ದಾರೆ.
ಇದಲ್ಲದೆ, ಅಥಣಿ ವಿಧಾನಸಭಾ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ಗ್ರಾಮ ಚಾವಡಿ ಹಾಗೂ ಸಂಬಂಧಿಸಿದ ಮತಗಟ್ಟೆಗಳಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ. ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಅರ್ಹ ವ್ಯಕ್ತಿಯ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿದ್ದರೆ, ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನಮೂನೆ–6ರಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೆಸರನ್ನು ಮರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

