ವಿಜಯಪುರ ಜಿಲ್ಲೆಯಲ್ಲಿ ಎಸ್ಐಆರ್ ಹೆಸರಿನಲ್ಲಿ 2.97 ಲಕ್ಷ ಮತದಾರರು ಪಟ್ಟಿಯಿಂದ ಹೊರಗೆ | ಮತ ಕಾವಲು ಸಮಿತಿ ಆಕ್ಷೇಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸಂಭವಿಸಿರುವ ಭಾರೀ ಬದಲಾವಣೆಗಳ ಕುರಿತು ಜಿಲ್ಲೆಯ SIR ಹೋರಾಟ ಸಮಿತಿ ಹಾಗೂ ಮತ ಕಾವಲು ಸಮಿತಿ ತೀವ್ರ ಆತಂಕ ಮತ್ತು ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ನಗರದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ ಮುಖಂಡರಾದ ಭೋಗೇಶ ಸೊಲಾಪೂರ, ಮೊಹಮ್ಮದ್ ಖದೀರ್, ಲಕ್ಷ್ಮಣ್ ಹಂದ್ರಾಳ, ಡಾ. ಗುರಿಕರ ಅವರು ಮಾತನಾಡಿ, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯವಾದರೂ, ಆ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕು ಕಳೆದುಹೋಗಬಾರದು ಎಂಬುದು ಮತ ಕಾವಲು ಸಮಿತಿಯ ಸ್ಪಷ್ಟ ನಿಲುವಾಗಿದೆ. ವಿಜಯಪುರ ಜಿಲ್ಲೆಯಲ್ಲಿ SIR ಪ್ರಕ್ರಿಯೆಯ ಮೊದಲ ಹಂತದಲ್ಲಿ ಒಟ್ಟು 19,82,114 ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಲಾಗಿತ್ತು. ಈ ಪೈಕಿ 16,84,968 ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಒಟ್ಟು 2,97,147 ಮತದಾರರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ. ಇವರಲ್ಲಿ 1,52,169 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡವರು, 59,093 ಗೈರು ಮತ್ತು 30,692 ಮತದಾರರು ಡುಪ್ಲಿಕೇಟ್ ಎಂದು ಗುರುತಿಸಲಾಗಿದೆ. ಇದು ಕೇವಲ ಅಂಕಿಅಂಶವಲ್ಲ. ಇದರ ಹಿಂದೆ ವಿಜಯಪುರ ಜಿಲ್ಲೆಯ ಸಾವಿರಾರು ಕುಟುಂಬಗಳ ಮತದಾನದ ಹಕ್ಕು ಅಡಗಿದೆ. ವಿಜಯಪುರ ನಗರ ಕ್ಷೇತ್ರದಲ್ಲಿ 79,737 ಮತದಾರರು ಪಟ್ಟಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಈ ಬಗ್ಗೆ ಸಂಪೂರ್ಣ ಪಾರದರ್ಶಕತೆ ಮತ್ತು ಸ್ಪಷ್ಟತೆ ನೀಡಬೇಕು. ಅರ್ಹ ಮತದಾರರ ಹೆಸರುಗಳನ್ನು ವೈಯಕ್ತಿಕ ಪರಿಶೀಲನೆ ಹಾಗೂ ಸಮರ್ಪಕ ಅವಕಾಶವಿಲ್ಲದೆ ಕೈಬಿಡಬಾರದು. ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕು ಕಳೆದುಹೋಗದಂತೆ ಮತ ಕಾವಲು ಸಮಿತಿ ವತಿಯಿಂದ ಕಾನೂನುಬದ್ಧ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸಲಾಗುವುದು” ಎಂದು ಹೇಳಿದರು.
ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವವರೆಗೆ ಮತ ಕಾವಲು ಸಮಿತಿ ತನ್ನ ಪ್ರಜಾಸತ್ತಾತ್ಮಕ ಮತ್ತು ಕಾನೂನುಬದ್ಧ ಹೋರಾಟವನ್ನು ಮುಂದುವರಿಸಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮತ ಕಾವಲು ಸಮಿತಿಯ ಸದಸ್ಯರಾದ ಅಕ್ರಮ ಮಾಶಾಲ್ಕರ್, ಫಯಾಜ್ ಕಲಾದಗಿ, ನೀಲಂಬಿಕಾ ಬಿರಾದಾರ್, ಶ್ರೀನಾಥ್ ಪೂಜಾರಿ ಉಪಸ್ಥಿತರಿದ್ದರು.

