ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ರಕ್ಷಾ ಬಂಧನ ಹಬ್ಬದ ಅಂಗವಾಗಿ ತಾಲ್ಲೂಕಿನ ತೊರವಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ವಿಶೇಷವಾಗಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಜಶ್ರೀ ತುಂಗಳ ಹಾಗೂ ಸಿಬ್ಬಂದಿ ಲಕ್ಷ್ಮಿ ಮಹಲ ಅವರು ಗ್ರಾಮ ಪಂಚಾಯತಿಯ ಎಲ್ಲ ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವ, ಪ್ರೀತಿ, ವಿಶ್ವಾಸ ಹಾಗೂ ಪರಸ್ಪರ ಸಹಕಾರದ ಭಾವನೆಯನ್ನು ಬೆಳೆಸಿದರು.
ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಪ್ರೀತಿ, ಬಾಂಧವ್ಯ ಹಾಗೂ ರಕ್ಷಣೆಯ ಸಂಕೇತವಾಗಿರುವುದರ ಜೊತೆಗೆ, ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಸಂದೇಶವನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಪಿಡಿಒ ರಾಜಶ್ರೀ ತುಂಗಳ ಅವರು ಪಂಚಾಯಿತಿ ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಕಚೇರಿಯಲ್ಲಿಯೂ ಕುಟುಂಬದಂತಹ ಆತ್ಮೀಯ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಒಂದು ಕುಟುಂಬದ ಸದಸ್ಯರಂತೆ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ. ಹಬ್ಬಗಳು ನಮ್ಮಲ್ಲಿ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದ ಭಾವನೆ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

