ಬಸವನಬಾಗೇವಾಡಿ: ವಾಲ್ಮೀಕಿ ಸಮಾಜಕ್ಕೆ ಸೇರಿದ ಮಹನೀಯರು ವಾಲ್ಮೀಕಿ ಜಾತಿಗೆ ಸೀಮಿತವಾಗಿ ಕೆಲಸ ಮಾಡದೇ ಇಡೀ ಸಮುದಾಯದ ಏಳ್ಗೆಗಾಗಿ ಶ್ರಮಿಸಿದ್ದಾರೆ. ಇಂತಹ ಸಮಾಜಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ರಾಮಾಯಣ ಕೃತಿ ನೀಡುವ ಮೂಲಕ ಭಾರತೀಯ ಸಂಸ್ಕ್ರತಿಯನ್ನು ಎತ್ತಿ ಹಿಡಿದ್ದಾರೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಯಲ್ಲಪ್ಪ ನಾಯಕ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜ ಬಾಂಧವರು ಗುರುಭಕ್ತಿ, ದೈವಭಕ್ತಿಯನ್ನು ಹೊಂದಿದ್ದಾರೆ. ವಾಲ್ಮೀಕಿಯವರ ಕುರಿತು ಕೆಲವರು ಅಪಪ್ರಚಾರ ಮಾಡುತ್ತಿರುವದು ವಿಷಾದನೀಯ. ವಾಲ್ಮೀಕಿ ಸಮಾಜದ ಕುರಿತು ಅವಹೇಳನಕಾರಿಯಾಗಿ ಹೇಳಬಾರದು ಎಂದು ಅಲಹಾಬಾದ್ ನ್ಯಾಯಾಲಯ ತೀರ್ಪು ನೀಡಿದೆ ಎಂದ ಅವರು, ದೇಶಕ್ಕೆ ಸಂವಿಧಾನ ನೀಡಿರುವ ಡಾ. ಅಂಬೇಡ್ಕರ ಅವರು ಸಹ ಸಾಕಷ್ಟು ಅಪಮಾನಕ್ಕೆ ಒಳಗಾಗಿರುವದನ್ನು ನೋಡುತ್ತೇವೆ. ಮಹರ್ಷಿ ವಾಲ್ಮೀಕಿ, ಡಾ.ಅಂಬೇಡ್ಕರ ಈ ಮಹನೀಯರನ್ನು ಸಮಕಾಲೀನ ಕಾಲದಲ್ಲಿ ಸ್ಮರಣೆ ಮಾಡುವದು ತುಂಬಾ ಅಗತ್ಯವಿದೆ ಎಂದರು.
ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಿಂದ ನಾವು ರಾಮರಾಜ್ಯದ ಕಲ್ಪನೆಯನ್ನು ಕಾಣುತ್ತೇವೆ. ರಾಮಾಯಣವು ಸಮಾಜಕ್ಕೆ ಮಾರ್ಗದರ್ಶಿ ಕೃತಿಯಾಗಿದೆ ಎಂದರೆ ತಪ್ಪಾಗಲಾರದು ಎಂದರು.
ವ್ಹಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು.
ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ತಹಸೀಲ್ದಾರ ಜಿ.ಎಸ್.ನಾಯಕ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಡಿಎಸ್‌ಎಸ್ ಮುಖಂಡ ಅರವಿಂದ ಸಾಲವಾಡಗಿ ಮಾತನಾಡಿದರು.
ವೇದಿಕೆಯಲ್ಲಿ ಹುಚ್ಚಪ್ಪಮುತ್ಯಾ ನಾಗರಾಳ, ಡಿವೈಎಸ್ಪಿ ಜಿ.ಎಂ.ಕರುಣಾಕರಶೆಟ್ಟಿ, ತಾಪಂ ಇಓ ಡಾ.ಯುವರಾಜ ಹನಗಂಡಿ, ಬಿಇಓ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ, ಪಿಐ ಶರಣಗೌಡ ನ್ಯಾಮಣ್ಣನವರ, ಪುರಸಭೆ ಸದಸ್ಯ ರವಿಕುಮಾರ ನಾಯ್ಕೋಡಿ, ವಾಲ್ಮೀಕಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ರಾಜನಾಳ, ಹಣಮಂತ ಬಡಿಗೇರ, ರಮೇಶ ಶಾಖಾಪೂರ, ಶಿವಪ್ಪ ಅವಜಿ, ಬಸನಗೌಡ ಪಾಟೀಲ, ಶ್ರೀಶೈಲ ಬಿರಾದಾರ ಇತರರು ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ ಸ್ವಾಗತಿಸಿದರು. ವಿರೇಶ ಗೂಡಲಮನಿ ನಿರೂಪಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ವಂದಿಸಿದರು.
ಮೆರವಣಿಗೆ: ಸಮಾರಂಭಕ್ಕೂ ಮುನ್ನ ತಹಸೀಲ್ದಾರ ಕಚೇರಿಯಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ವಿವಿಧ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರಂಭ ನಡೆಯುವ ಸ್ಥಳಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ವಾಲ್ಮೀಕಿ ಸಮಾಜ ಬಾಂಧವರು ಭಾಗವಹಿಸಿದ್ದರು.
Related Posts
Add A Comment