ಡಿ.13 ರಂದು ವಿಜಯಪುರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2026 | ಪೂರ್ವಭಾವಿ ಸಭೆಯಲ್ಲಿ ಡಾ.ಮಹಾಂತೇಶ ಬಿರಾದಾರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂದಿನ ವರ್ಷದಿಂದ ವೃಕ್ಷಥಾನ್ ಹೆರಿಟೇಜ್ ರನ್ 42 ಕಿ.ಮಿ ಫುಲ್ ಮ್ಯಾರಾಥಾನ್ ನಡೆಸಲು ಈಗಿನಿಂದಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ಡಾ. ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2026 ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಎನ್.ಇ.ಬಿ (NEB) ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 42 ಕಿ. ಮಿ. ಫುಲ್ ಮ್ಯಾರಾಥಾನ್ ಸಂಘಟಿಸುವ ಸಂಸ್ಥೆಯೊಂದಿಗೆ ವೃಕ್ಷಥಾನ್ ಹೆರಿಟೇಜ್ ರನ್ ಆಯೋಜನೆ ಸಮಿತಿ ಫುಲ್ ಮ್ಯಾರಾಥಾನ್ ನಡೆಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ 2027ರಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಫುಲ್ ಮ್ಯಾರಾಥಾನ ನಡೆಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳುವಂತೆ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಾರಿ ಡಿಸೆಂಬರ್ 13 ರಂದು ವೃಕ್ಷಥಾನ್ ಹೆರಿಟೇಜ್ ರನ್- 2026 ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಆಧ್ಯಾತ್ಮಿಕ ಚಿಂತಕ ವಿನಯ ಗುರೂಜಿ, ಸಚಿವ ಕೃಷ್ಣ ಭೈರೇಗೌಡ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ವೆಂಕಟೇಶ ಪ್ರಸಾದ, ಗುರುಪ್ರಸಾದ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಅಕ್ಟೋಬರ್ ನಲ್ಲಿ ಮುಕ್ತಾಯಗೊಳಿಸಲಾಗುವುದು. ವೃಕ್ಷೋಥಾನ್ ರನ್ ಜಾಗೃತಿಗಾಗಿ ಪ್ರತಿ ರವಿವಾರ ಈ ಓಟದ ಸಂಬಂಧ ಪ್ರಚಾರ ಚಟುವಟಿಕೆಗಳನ್ನು ನಡೆಸಲಾಗುವುದು. ಸೆಪ್ಟೆಂಬರ್ 6 ರಂದು ಮಹಿಳೆಯರಿಗಾಗಿ ಮತ್ತು ಸೆಪ್ಟೆಂಬರ್ 12 ರಂದು ಮಕ್ಕಳಿಗಾಗಿ ಓಟವನ್ನು ಆಯೋಜಿಸಲಾಗುವುದು. ಅಲ್ಲದೇ, ಮಕ್ಕಳಿಗಾಗಿ ನಿಬಂಧ ಮತ್ತು ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಈ ಕುರಿತು ಶೀಘ್ರದಲ್ಲಿ ದಿನಾಂಕ, ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು, ಅರಣ್ಯ ಇಲಾಖೆ ಸಿಬ್ಬಂದಿ, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ವೃಕ್ಷೋಥಾನ ಜಾಗೃತಿ ಓಟ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ ಮಾತನಾಡಿ, ಇತ್ತೀಚೆಗೆ ಕೋರ್ ಕಮಿಟಿ ಸದಸ್ಯರು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಆಗ ಸಚಿವರು ಹೊರ ರಾಜ್ಯಗಳ ವೃತ್ತಿಪರ ಓಟಗಾರರನ್ನು ಆಹ್ವಾನಿಸಲು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ಬೆಂಗಳೂರು, ಸೋಲಾಪುರ, ಪುಣೆ ಮತ್ತು ಹೈದ್ರಾಬಾದಗಳಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಮನೆ (ಹೋಂ ಗಾರ್ಡನ್), ಬಡಾವಣೆಗಳಲ್ಲಿ ಉದ್ಯಾನ ಬೆಳೆಸಿರುವ ಪರಿಸರ ಪ್ರೇಮಿಗಳನ್ನು ಗುರುತಿಸಿ ಅವರ ಕಾರ್ಯವನ್ನು ಪರಿಶೀಲಿಸಿ ಅಂಥವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಡಿಎಫ್ಓ ಗಳಾದ ಮಲ್ಲಿನಾಥ ಕುಸನಾಳ, ಶಿವರುದ್ರಪ್ಪ ಕಬಾಡಗಿ, ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ ಪದಾಧಿಕಾರಿಗಳಾದ ಡಾ.ಶಂಕರಗೌಡ, ಸಂತೋಷ ಔರಸಂಗ, ಡಾ. ರಾಜು ಯಲಗೊಂಡ, ವಿನಯ ಕಂಚ್ಯಾಣಿ, ವೀರೇಂದ್ರ ಗುಚ್ಚೆಟ್ಟಿ, ಶಿವನಗೌಡ ಪಾಟೀಲ, ಶಿವಾನಂದ ಉಪಾಸೆ, ಗುರುಶಾಂತ ಕಾಪಸೆ, ಡಿ.ಕೆ.ತಾವಸೆ, ಡಾ.ಪ್ರವೀಣ ಚೌರ, ಶಿವಾನಂದ ಕುಂಬಾರ, ಸೋಮು ಮಠ, ಸೋಮಶೇಖರ ಸ್ವಾಮಿ, ಅಮೀತ ಬಿರಾದಾರ, ಮಹೇಶ ವಿ. ಶಟಗಾರ, ಸಿದ್ದು ನಾಯ್ಕೊಡಿ, ಅಶ್ಪಾಕ ಮನಗೂಳಿ, ಸಂದೀಪ ಮಡಗೊಂಡ, ಶ್ರೀಕಾಂತ ಹಡಲಗೇರಿ, ವೀಣಾ ದೇಶಪಾಂಡೆ, ಸಂಗಮೇಶ ಹಾವರಗಿ, ವಿನಯಕುಮಾರ ಕೋರೆ, ರಮೇಶ ಬಿರಾದಾರ, ಸಮೀರ ಬಳಿಗಾರ, ನಂದೀಶ ಹುಂಡೇಕಾರ, ವಿಜಯ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

