ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಆಧಾರವಾಗಿದ್ದು, ಸಮುದಾಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಯೋಜನಾಧಿಕಾರಿ ನಟರಾಜ್ ಎಲ್.ಎಂ. ಹೇಳಿದರು.
ಹಲಸಂಗಿ ಹಾಗೂ ಲೋಣಿ ಬಿ.ಕೆ. ವಲಯದ ಪದಾಧಿಕಾರಿಗಳಿಗಾಗಿ ಝಳಕಿ ಪಟ್ಟಣದ ಬೀರಲಿಂಗೇಶ್ವರ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ, ಸುಜ್ಞಾನ ನಿಧಿ ವಿದ್ಯಾರ್ಥಿವೇತನ, ಮಾಶಾಸನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಸಂಘಗಳ ಮೂಲಕ ಗ್ರಾಮೀಣ ಜನರಲ್ಲಿ ಉಳಿತಾಯ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸುವುದರ ಜೊತೆಗೆ ಒಕ್ಕೂಟದ ಪರಿಕಲ್ಪನೆಯ ಮೂಲಕ ಸಂಘಟನೆಗೆ ಬಲ ನೀಡಲಾಗುತ್ತಿದೆ ಎಂದರು.
ವಿಜಯಪುರ ಜಿಲ್ಲಾ ವಿಚಕ್ಷಣಾಧಿಕಾರಿ ಶ್ರೀಕಾಂತ್ ಅವರು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ವಿಜಯಪುರ ಜಿಲ್ಲಾ ಬಿ.ಸಿ. ವಿಭಾಗದ ಪ್ರಬಂಧಕ ಸಂತೋಷಕುಮಾರ್ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು.
ಲೋಣಿ ಬಿ.ಕೆ. ವಲಯದ ಮೇಲ್ವಿಚಾರಕ ಮಹಾಂತೇಶ ವಿ.ಎ. ನಿರೂಪಿಸಿದರು. ಹಲಸಂಗಿ ವಲಯದ ಮೇಲ್ವಿಚಾರಕ ಅರ್ಜುನ ಪಾಟೀಲ ವಂದಿಸಿದರು.
ಕಾರ್ಯಾಗಾರದಲ್ಲಿ ಎರಡೂ ವಲಯಗಳ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸಿಎಸ್‌ಸಿ ಸೇವಾದಾರರು ಹಾಗೂ ಎರಡೂ ವಲಯಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

