ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ದಿನಾಲೂ ರಾತ್ರಿ ಮುಂಜಾನೆ ೫ ಗಂಟೆಗೆ ಏಳಬೇಕೆಂದು ಅಲಾರಾಂ ಇಡುತ್ತೇವೆ. ಅಲಾರಾಂ ಹೊಡೆದಾಗ, ಅದನ್ನು ‘ಸ್ನೂಜ್’ ಮಾಡಿ ಮತ್ತೊಂದು ಮುಸುಕು ಹೊದ್ದು ಮಲಗುವುದು ನಮ್ಮ ಮನಸ್ಸಿಗೆ ತುಂಬಾ ಇಷ್ಟ. ಆದರೆ, ಅ ಆಲಸ್ಯವನ್ನು ಬದಿಗಿಟ್ಟು ಎದ್ದು ಓದುವುದು ಯಶಸ್ಸಿಗೆ ಇಷ್ಟ. ನಾಲಿಗೆಗೆ ರುಚಿ ಕೊಡುವ ಜಂಕ್ ಫುಡ್ ತಿನ್ನುವುದು ನಮಗೆ ಇಷ್ಟ, ಆದರೆ ಆರೋಗ್ಯ ಮತ್ತು ಫಿಟ್‌ನೆಸ್ ಎಂಬ ಯಶಸ್ಸಿಗೆ ಪ್ರತಿದಿನ ಕಹಿ ಕಷಾಯ ಕುಡಿಯುವುದು ಮತ್ತು ಹಸಿರು ತರಕಾರಿ ತಿನ್ನುವುದು ಇಷ್ಟ. ಪರೀಕ್ಷೆಯ ಸಮಯದಲ್ಲಿ ಕೈಯಲ್ಲಿರುವ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುತ್ತಾ ಕೂರುವುದು ನಮಗೆ ಇಷ್ಟ, ಆದರೆ ಆ ಮೊಬೈಲ್ ಪಕ್ಕಕ್ಕಿಟ್ಟು ಕಣ್ಣು ಕೆಂಪಾಗುವಂತೆ ಕಠಿಣ ವಿಷಯಗಳನ್ನು ಓದುವುದು ಯಶಸ್ಸಿಗೆ ಇಷ್ಟ.
ಇಷ್ಟವಿಲ್ಲದ್ದು
ನಮಗೆ ಇಷ್ಟವಿಲ್ಲದ್ದು ಯಶಸ್ಸಿಗೆ ಇಷ್ಟ: “ಯಶಸ್ಸಿನ ರಹಸ್ಯವು ನೀವು ಇಷ್ಟಪಡದ ಕೆಲಸಗಳನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದರಲ್ಲಿದೆ.” ಈ ಮಾತು ಕೇವಲ ಒಂದು ವಾಕ್ಯವಲ್ಲ; ಇದು ಜಗತ್ತಿನ ಪ್ರತಿಯೊಬ್ಬ ಮಹಾನ್ ಸಾಧಕನ ಜೀವನದ ತಿರುಳು. ನಮ್ಮ ಮನಸ್ಸು ಯಾವಾಗಲೂ ಸುಲಭವಾದ, ಆರಾಮದಾಯಕವಾದ ಮತ್ತು ತಕ್ಷಣದ ಸಂತೋಷ ಕೊಡುವ ಕೆಲಸಗಳತ್ತ ಆಕರ್ಷಿತವಾಗುತ್ತದೆ. ಹೀಗಾಗಿ ನಾವು ತಕ್ಷಣದ ಸಂತೋಷಕ್ಕೆ ಜೋತು ಬೀಳುತ್ತೇವೆ. ಸಮಯ ವ್ಯರ್ಥಗೊಳಿಸುತ್ತೇವೆ. ಆದರೆ, ನೈಜ ಯಶಸ್ಸು ಸದಾ ಕಠಿಣ ಪರಿಶ್ರಮ, ಶಿಸ್ತು ಮತ್ತು ತ್ಯಾಗವನ್ನು ಬೇಡುತ್ತದೆ. ನಮಗೆ ಯಾವುದು ಕಷ್ಟ ಅನಿಸುತ್ತದೆಯೋ, ಯಾವುದು ನಮಗೆ ಇಷ್ಟವಿರುವುದಿಲ್ಲವೋ, ಅದೇ ಯಶಸ್ಸಿನ ಹೆಬ್ಬಾಗಿಲನ್ನು ತೆರೆಯುವ ಕೀಲಿ ಕೈ ಆಗಿರುತ್ತದೆ. ಬಾಕ್ಸಿಂಗ್ ದಂತಕಥೆಯ ಮಹಮ್ಮದ್ ಅಲಿ ಅವರು ಒಮ್ಮೆ ಹೇಳಿದ್ದರು: “ನಾನು ತರಬೇತಿಯ ಪ್ರತಿಯೊಂದು ನಿಮಿಷವನ್ನೂ ದ್ವೇಷಿಸುತ್ತಿದ್ದೆ (ಇಷ್ಟಪಡುತ್ತಿರಲಿಲ್ಲ). ಆದರೆ ನಾನು ನನಗೆ ನಾನೇ ಹೇಳಿಕೊಂಡೆ – ‘ಈಗ ಕಷ್ಟಪಡು, ಇಡೀ ಜೀವನ ಚಾಂಪಿಯನ್ ಆಗಿ ಬದುಕು.’ ತರಬೇತಿಯ ನೋವನ್ನು ಸಹಿಸಿಕೊಂಡಿದ್ದರಿಂದಲೇ ಅವರು ಜಗತ್ತಿನ ಶ್ರೇಷ್ಠ ಬಾಕ್ಸರ್ ಆದರು.
ಅಭ್ಯಾಸ
ನಮಗೆ ಯಾವುದು ತಕ್ಷಣದ ಸುಖ ನೀಡುತ್ತದೆಯೋ, ಅದು ನಮ್ಮನ್ನು ಸೋಲಿನತ್ತ ಕೊಂಡೊಯ್ಯುತ್ತದೆ. ಆದರೆ ನಮಗೆ ಯಾವುದು ಕಷ್ಟ, ಬೇಸರ ಮತ್ತು ಇಷ್ಟವಿಲ್ಲದ ಕೆಲಸ ಅನಿಸುತ್ತದೆಯೋ, ಅದೇ ನಮ್ಮನ್ನು ಯಶಸ್ಸಿನ ಶಿಖರಕ್ಕೆ ತಲುಪಿಸುತ್ತದೆ. ಅಮೆರಿಕಾದ ಪ್ರಸಿದ್ಧ ಲೇಖಕ ಆಲ್ಬರ್ಟ್ ಇ.ಎನ್.ಗ್ರೇ ಅವರ ಪ್ರಕಾರ, “ಯಶಸ್ವಿ ವ್ಯಕ್ತಿಗಳು ತಾವು ಇಷ್ಟಪಡದ ಕೆಲಸಗಳನ್ನೇ ಮಾಡುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಅವರು ಆ ಕೆಲಸಗಳನ್ನು ಪ್ರೀತಿಸುತ್ತಾರೆ ಎಂದಲ್ಲ, ಆದರೆ ತಮ್ಮ ಗುರಿಯ ಮೇಲಿರುವ ಪ್ರೀತಿ ಅವರಿಂದ ಆ ಕೆಲಸವನ್ನು ಮಾಡಿಸುತ್ತದೆ.” ಅಂದರೆ, ಯಶಸ್ಸಿಗೆ ತಲುಪಲು ನಾವು ನಮ್ಮ ಇಂದಿನ ಸಣ್ಣಪುಟ್ಟ ಇಷ್ಟಗಳನ್ನು ತ್ಯಾಗ ಮಾಡಲೇಬೇಕಾಗುತ್ತದೆ
ಕಠಿಣ ನಿಯಮ
ಯಶಸ್ಸಿಗೆ ತಲುಪಲು ನಾವು ತತ್ಕಾಲದ ಇಷ್ಟ-ಕಷ್ಟಗಳನ್ನು ಬದಿಗಿಡಬೇಕಾಗುತ್ತದೆ .ಆರಾಮ ವಲಯದ ಆಚೆಗಿನ ಪ್ರಪಂಚ ನಮಗೆ ಇಷ್ಟವಾದ ಕೆಲಸಗಳು ನಮ್ಮನ್ನು ‘ಆರಾಮ ವಲಯ’ದಲ್ಲಿ ಇಡುತ್ತವೆ. ಬೆಳಿಗ್ಗೆ ಬೇಗ ಏಳುವುದು, ಗಂಟೆಗಟ್ಟಲೆ ಓದುವುದು, ಶಿಸ್ತಿನಿಂದ ಆಹಾರ ಪದ್ಧತಿ ಪಾಲಿಸುವುದು, ಪ್ರತಿದಿನ ಬೆವರು ಹರಿಸುವುದು ಯಾರಿಗೂ ಸುಲಭವಾಗಿ ಇಷ್ಟವಾಗುವುದಿಲ್ಲ. ಆದರೆ, ಈ ‘ಇಷ್ಟವಿಲ್ಲದ’ ಪ್ರಕ್ರಿಯೆಗಳೇ ಯಶಸ್ಸಿಗೆ ಅತ್ಯಂತ ಪ್ರಿಯವಾದವುಗಳು. ಸೋಮಾರಿ ಮನಸ್ಸು ವಿಶ್ರಾಂತಿಯನ್ನು ಬಯಸಿದರೆ, ಯಶಸ್ಸು ಜಾಗರೂಕತೆಯನ್ನು ಬಯಸುತ್ತದೆ. ನಮಗೆ ಇಷ್ಟವಿಲ್ಲದ ಕಹಿ ಕಷಾಯವೇ ಹೇಗೆ ಆರೋಗ್ಯಕ್ಕೆ ಒಳ್ಳೆಯದೋ, ಹಾಗೆಯೇ ನಮಗೆ ಇಷ್ಟವಿಲ್ಲದ ಕಠಿಣ ನಿಯಮಗಳು ನಮ್ಮ ಯಶಸ್ಸಿಗೆ ಶ್ರೀರಕ್ಷೆ.
ನಿರಂತರ ಪ್ರಯತ್ನ
ಪರಿಶ್ರಮ ಯಶಸ್ಸಿನ ಮೂಲಾಧಾರ. ಕೇವಲ ಅದೃಷ್ಟ ಅಥವಾ ಪ್ರತಿಭೆಯಿಂದ ಸಾಧನೆ ಅಸಾಧ್ಯ. ನಿರಂತರ ಪ್ರಯತ್ನ ಬೇಕು. ಎಷ್ಟೇ ಅಡೆತಡೆಗಳು ಬಂದರೂ ಎದೆಗಾರಿಕೆಯಿಂದ ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು. ಶ್ರಮಪಡದ ಹೊರತು ಏನನ್ನೂ ಪಡೆಯಲು ಸಾಧ್ಯವಿಲ್ಲ. ಈ ಸಿದ್ಧಾಂತಕ್ಕೆ ಜಗತ್ತಿನ ಶ್ರೇಷ್ಠ ಸಾಧಕರಾದ ಡಾ. ಬಿ. ಆರ್. ಅಂಬೇಡ್ಕರ್‌ಗಿಂತ ದೊಡ್ಡ ಉದಾಹರಣೆ ಬೇರೊಂದಿಲ್ಲ: ಬಾಲ್ಯದಲ್ಲಿ ತೀವ್ರ ಸಾಮಾಜಿಕ ತಾರತಮ್ಯ ಮತ್ತು ಬಡತನದ ನಡುವೆ, ಹಸಿವು ಮತ್ತು ನಿದ್ದೆಯನ್ನು ಮರೆತು ದಿನಕ್ಕೆ ೧೮ ರಿಂದ ೨೦ ಗಂಟೆಗಳ ಕಾಲ ಓದುತ್ತಿದ್ದರು. ಕತ್ತಲ ಕೋಣೆಯಲ್ಲಿ ದೀಪದ ಬೆಳಕಿನಲ್ಲಿ ಕಷ್ಟಪಟ್ಟು ಓದುವುದು ದೈಹಿಕವಾಗಿ ಇಷ್ಟವಾಗುವ ಕೆಲಸವಾಗಿರಲಿಲ್ಲ. ಆದರೆ ಆ ಜ್ಞಾನಾರ್ಜನೆಯ ತಪಸ್ಸೇ ಅವರನ್ನು ಭಾರತದ ಸಂವಿಧಾನ ಶಿಲ್ಪಿಯನ್ನಾಗಿ ಮಾಡಿತು.

ತ್ಯಾಗ
ಗೆಲುವಿಗೆ ನೀಡಬೇಕಾದ ಅತಿ ದೊಡ್ಡ ಕಾಣಿಕೆ ಎಂದರೆ ತ್ಯಾಗ. ಇಂದು ಖುಷಿ ನೀಡುವ ಸಣ್ಣಪುಟ್ಟ ಮೋಜು-ಮಸ್ತಿಗಳನ್ನು ತ್ಯಜಿಸಲೇಬೇಕು. ಯಶಸ್ವಿ ವ್ಯಕ್ತಿಗಳು ಗುರಿ ಸಾಧನೆಗಾಗಿ ನಿದ್ದೆ, ವಿಶ್ರಾಂತಿ ಮತ್ತು ವೈಯುಕ್ತಿಕ ಇಷ್ಟಗಳನ್ನು ತ್ಯಾಗ ಮಾಡುತ್ತಾರೆ. ಎ.ಪಿ.ಜೆ. ಅಬ್ದುಲ್ ಕಲಾಂ ರಾಮೇಶ್ವರಂನ ಬೀದಿಗಳಲ್ಲಿ ಮುಂಜಾನೆ ಚಳಿ ಗಾಳಿ ಇರುತ್ತಿದ್ದರೂ, ಇಷ್ಟವಿಲ್ಲದಿದ್ದರೂ ನಿದ್ದೆ ಗೆದ್ದು ಪತ್ರಿಕೆಗಳನ್ನು ಹಂಚುತ್ತಿದ್ದರು. ನಂತರ ಗಣಿತ ಮತ್ತು ವಿಜ್ಞಾನದ ಕಠಿಣ ಸಮೀಕರಣಗಳೊಂದಿಗೆ ರಾತ್ರಿಗಳನ್ನೆಲ್ಲ ಕಳೆದರು. ಸುಖದ ನಿದ್ದೆಯನ್ನು ತ್ಯಾಗ ಮಾಡಿದ್ದರಿಂದಲೇ ಅವರು ‘ಮಿಸೈಲ್ ಮ್ಯಾನ್’ ಆಗಲು ಸಾಧ್ಯವಾಯಿತು.
ದಿನಚರಿ
ಕಠಿಣ ಪರಿಶ್ರಮ ಮತ್ತು ಮತ್ತು ತ್ಯಾಗಗಳು ನಿರಂತರವಾಗಿ ನಡೆಯಬೇಕೆಂದರೆ ದಿನಚರಿ ಅತಿ ಮುಖ್ಯ. ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳಿದಂತೆ ‘ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಅಭ್ಯಾಸಗಳನ್ನು ನೀವು ಬದಲಾಯಿಸಬಹುದು. ಆ ಅಭ್ಯಾಸಗಳು ಖಂಡಿತವಾಗಿಯೂ ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ. ಸಚಿನ್ ತೆಂಡೂಲ್ಕರ್: ಮುಂಜಾನೆ ೪ ಗಂಟೆಗೆ ಎದ್ದು, ಭಾರವಾದ ಕಿಟ್ ಬ್ಯಾಗ್ ಹೊತ್ತು ಶಿವಾಜಿ ಪಾರ್ಕ್‌ಗೆ ತಾಲೀಮಿಗೆ ಹೋಗುವುದು ಹದಿಹರೆಯದ ಹುಡುಗನಿಗೆ ಯಾವಾಗಲೂ ಇಷ್ಟವಿರುತ್ತಿರಲಿಲ್ಲ. ತರಬೇತುದಾರರಾದ ರಮಾಕಾಂತ್ ಅಂಬೇಡ್ಕರ್ ಅವರ ಕಠಿಣ ಶಿಕ್ಷೆಗಳು ಬೇಸರ ತರಿಸುತ್ತಿದ್ದವು. ಆದರೆ, ಆ ಇಷ್ಟವಿಲ್ಲದ ಕಠಿಣ ದಿನಚರಿಯೇ ಅವರನ್ನು ‘ಕ್ರಿಕೆಟ್ ದೇವರು’ ಸ್ಥಾನಕ್ಕೆ ಏರಿಸಿತು.
ಕಠಿಣ ಶಿಸ್ತು
ಯಶಸ್ಸು ಎನ್ನುವುದು ಸುಲಭವಾಗಿ ಸಿಗುವ ಸಿದ್ಧಾನ್ನವಲ್ಲ. ಅದಕ್ಕೆ ನಿರಂತರ ಪ್ರಯತ್ನದ ಬೆವರು ಬೇಕು. ನಮಗೆ ಓದಲು ಇಷ್ಟವಿಲ್ಲದಾಗ ಪುಸ್ತಕ ಹಿಡಿಯುವುದು, ಸೋಲು ಒಪ್ಪಿಕೊಳ್ಳಲು ಮನಸ್ಸಾದಾಗ ಮತ್ತೊಮ್ಮೆ ಪ್ರಯತ್ನಿಸುವುದು—ಇವೇ ಯಶಸ್ಸಿನ ನಿಯಮಗಳು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ:” ಯಾವ ಕೆಲಸವು ಆರಂಭದಲ್ಲಿ ವಿಷದಂತೆ ಕಹಿಯಾಗಿರುತ್ತದೆಯೋ, ಅದು ಕೊನೆಯಲ್ಲಿ ಅಮೃತದಂತೆ ಮಧುರವಾದ ಫಲವನ್ನು ನೀಡುತ್ತದೆ. ನಮ್ಮ ಮನಸ್ಸಿನ ‘ಇಷ್ಟ’ಗಳನ್ನು ನಿಯಂತ್ರಿಸಿ, ಯಶಸ್ಸಿಗೆ ‘ಇಷ್ಟ’ವಾದ ಶಿಸ್ತು, ಕಠಿಣ ಪರಿಶ್ರಮ, ಮತ್ತು ಸಮಯ ಪ್ರಜ್ಞೆಯನ್ನು ನಮ್ಮದಾಗಿಸಿಕೊಳ್ಳಬೇಕು. ಇಂದಿನ ತಾತ್ಕಾಲಿಕ ಕಷ್ಟವೇ ನಾಳಿನ ಶಾಶ್ವತ ಯಶಸ್ಸಿನ ಮುನ್ನುಡಿ.

ಕೊನೆ ಹನಿ
ಕೊನೆಯದಾಗಿ ಹೇಳಬೇಕೆಂದರೆ, ಯಶಸ್ಸು ಯಾವುದೇ ಉಚಿತ ಕೊಡುಗೆಯಲ್ಲ. ಅದು ನಾವು ಕೊಡುವ ತ್ಯಾಗಕ್ಕೆ ಸಿಗುವ ಪ್ರತಿಫಲ. ನಿಮ್ಮ ಮನಸ್ಸಿಗೆ ಇಷ್ಟವಿಲ್ಲದಿದ್ದರೂ, ನಿಮ್ಮ ಗುರಿಗೆ ಯಾವುದು ಅಗತ್ಯವೋ ಅದನ್ನು ಮಾಡಲು ಕಲಿಯಿರಿ. ಯಾವಾಗ ನೀವು ನಿಮ್ಮ ಆಲಸ್ಯದ ‘ಇಷ್ಟ’ಗಳನ್ನು ಮೀರಿ, ಯಶಸ್ಸಿಗೆ ‘ಇಷ್ಟ’ವಾದ ಹಾದಿಯಲ್ಲಿ ನಡೆಯುತ್ತೀರೋ, ಆಗ ಯಶಸ್ಸು ನಿಮ್ಮ ಪಾದದಡಿಗೆ ಬರುತ್ತದೆ. ನಿಮ್ಮ ಮನಸ್ಸಿನ ಇಷ್ಟಗಳನ್ನು ಗೆದ್ದು, ಯಶಸ್ಸಿನ ಇಷ್ಟಕ್ಕೆ ಶರಣಾದರೆ, ಜಗತ್ತು ಮೆಚ್ಚುವ ಸಾಧಕರಾಗಿ ಮುನ್ನಡೆಯಬಹುದು.


