ಕಾರ್ಯಕ್ರಮದ ವ್ಯವಸ್ಥಿತ ನಿರ್ವಹಣೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ವಿಜಯಪುರ: ಸಾರ್ವಜನಿಕರ ವಿವಿಧ ಸಮಸ್ಯೆ-ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವ ಸರ್ಕಾರದ ನಿರ್ದೇಶನದಂತೆ ನವೆಂಬರ್ ೨ ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಜನತಾ ದರ್ಶನ ಕಾರ್ಯಕ್ರಮ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಳೆದ ಬಾರಿ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ಒಟ್ಟು ೭೦೯ ಅರ್ಜಿಗಳಲ್ಲಿ ಈವರೆಗೆ ೫೪೨ ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದು, ಬಾಕಿ ಇರುವ ೧೬೭ ಅರ್ಜಿಗಳನ್ನು ಕೂಡಲೇ ಬಾಕಿ ಉಳಿಸಿಕೊಳ್ಳದೇ ಇತ್ಯರ್ಥಪಡಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜನತಾ ದರ್ಶನ ಕಾರ್ಯಕ್ರಮದ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಒದಗಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಗರ ಮತ್ತು ಡಂಗು ಸಾರುವುದು, ವಿಜಯಪುರ ನಗರ ಸೇರಿದಂತೆ ಪುರಸಭೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಡಿಯೋ ಕ್ಲೀಪ್‌ನ್ನು ತಯಾರಿಸಿ ಕಸ ವಿಲೇವಾರಿ ವಾಹನಗಳ ಮೂಲಕ ಧ್ವನಿವರ್ಧಕಗಳ ಮೂಲಕ ಪ್ರಚಾರ ಕೈಗೊಳ್ಳಬೇಕು. ಕಾರ್ಯಕ್ರಮ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವುದರಿಂದ ಜನಸಂದನಿಯಾಗದಂತೆ ನೋಡಿಕೊಳ್ಳಬೇಕು. ಕೌಂಟರ್‌ಗಳಿಗೆ ನೇಮಿಸಲಾದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಿದ ನಂತರ ಟೋಕನ್ ನೀಡುವ ವ್ಯವಸ್ಥೆ ಮಾಡಬೇಕು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಸಮಸ್ಯೆಗಳಿಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದಲ್ಲದೇ ಸಾರ್ವಜನಿಕರು ಕುಂದು ಕೊರತೆ ನಿವಾರಣಾ ಸಮಸ್ಯೆಗಳನ್ನು ಐಪಿಜಿಆರ್‌ಎಸ್ https://ipgrs.karnataka.gov.in ತಂತ್ರಾಂಶದಲ್ಲಿ ದಾಖಲಿಸುವುದರೊಂದಿಗೆ ತಮ್ಮ ಅಹವಾಲು-ಕುಂದು ಕೊರತೆಗಳನ್ನು ದಾಖಲಿಸಿ ಸಹ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಇಂಡಿ ಉಪ ವಿಭಾಗಾಧಿಕಾರಿಗಳಾದ ಅಬೀದ್ ಗದ್ಯಾಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಹೆಸ್ಕಾಂ. ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅದಿಕಾರಿ ಈರಣ್ಣ ಆಶಾಪೂರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುಂಡಲಿಕ ಮಾನವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.