ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯದವರು ಮುಖ್ಯಮಂತ್ರಿಯಾಗುವುದು ಅಪರೂಪ. ಆದರೆ ಸಿದ್ದರಾಮಯ್ಯ ಅವರು ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸ ಗಳಿಸುವ ರೀತಿಯಲ್ಲಿ ಸಮ ಸಮಾಜದ ಆಶಯದೊಂದಿಗೆ ಕಾರ್ಯನಿರ್ವಹಿಸಿದ್ದರಿಂದ ಎರಡು ಬಾರಿ ಸಿಎಂ ಸ್ಥಾನವನ್ನು ಅಲಂಕರಿಸುವ ಅವಕಾಶ ದೊರೆತಿದೆ. ಅವರ ರೀತಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುವುದು ಸುಲಭವಲ್ಲ. ಆದರೂ ಎಲ್ಲ ಸಮುದಾಯಗಳ ಆಶಯಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅವರ ಹಾದಿಯಲ್ಲಿ ನಡೆಯಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸಿಂದಗಿ ನಗರದ ಗುಂದಗಿ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲುಮತ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸಿಗೆ ಸೂಕ್ತ ರೂಪ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಈ ವಿಷಯಕ್ಕಾಗಿ ಹೋರಾಟ ನಡೆಸಿದರೆ ಸರ್ಕಾರದ ಮಟ್ಟದಲ್ಲಿ ನನ್ನ ಬೆಂಬಲ ಸದಾ ಇರಲಿದೆ ಎಂದರು.
ಕಾರ್ಯಕ್ರಮದ ಫೋಟೋ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅಶೋಕ ಮನಗೂಳಿ, ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ವೀರಮರಣ ಹೊಂದಿದ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯ ಸಂದರ್ಭದಲ್ಲಿ ಸಮಾಜದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪುರಸ್ಕಾರ ಉತ್ತಮ ಕಾರ್ಯವಾಗಿದೆ. ಪ್ರತಿವರ್ಷ ನಿರಂತರವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.
ಅದ್ಧೂರಿ ಮೆರವಣಿಗೆ: ಬಸವೇಶ್ವರ ವೃತ್ತದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಆರಂಭಗೊಂಡು ಪತ್ರಿಕಾ ಬೀಷ್ಮ ರೇ.ಚ. ರೇವಡಿಗಾರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಿದ ಮೆರವಣಿಗೆಯು ಟಿಪ್ಪು ಸುಲ್ತಾನ್ ವೃತ್ತದ ಮೂಲಕ ಗುಂದಗಿ ಫಂಕ್ಷನ್ ಹಾಲ್‌ಗೆ ತಲುಪಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಧಾರವಾಡ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಮನಸೂರು ಆಶೀರ್ವಚನ ನೀಡಿದರು.
ಕೆ.ಈ. ಕಾಂತೇಶ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಮಾಜಿ ಶಾಸಕ ಶರಣಪ್ಪ ಸುಣಗಾರ, ಬೆಂಗಳೂರು ಕುವೆಂಪು ಭಾಷಾ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ, ಶರಣು ತಳಕೇರಿ ಹಾಗೂ ಡಾ.ಮಹಾಂತೇಶ ತಡಲಗಿ ಮಾತನಾಡಿದರು. ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ರಾಯಣ್ಣ ಇವಣಗಿ ಅಧ್ಯಕ್ಷತೆ ವಹಿಸಿದ್ದರು. ಗೊಳಸಾರ ಶ್ರೀಮಠದ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು, ಗುಬ್ಬೇವಾಡ ಸೋಮೇಶ್ವರ ಆಶ್ರಮದ ಕನ್ನಯ್ಯ ಮಹಾರಾಜರು, ಗೌರ.ಬಿ.ಭಕ್ತಿಮಂದಿರದ ಅಭಿನವ ಯಲ್ಲಾಲಿಂಗ ಮಹಾರಾಜರು, ಮಲ್ಲಣ್ಣ ಸಾಲಿ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ಬಿಸನಾಳ, ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಕೆಕೆಆರ್‌ಟಿಸಿ ವಿಭಾಗೀಯ ನಿವೃತ್ತ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ನಾಗಪ್ಪ ಶಿವೂರ, ರವಿ ನಾಯ್ಕೋಡಿ, ಸಿದ್ದು ಬುಳ್ಳಾ, ನ್ಯಾಯವಾದಿ ಎಸ್.ಕೆ.ಪೂಜಾರಿ, ವೈ.ಸಿ. ಮಯೂರ, ಮಲ್ಲಿಕಾರ್ಜುನ ಸಾವಳಸಂಗ ಸೇರಿದಂತೆ ಸಮಾಜ ಬಾಂಧವರು ಇದ್ದರು. ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ ಹಾಗೂ ಶಿಕ್ಷಕ ಮಾಳಪ್ಪ ಕೆರಕಿ ನಿರೂಪಿಸಿದರು. ಶಿಕ್ಷಕ ಎಸ್.ಎಸ್. ಸಾತಿಹಾಳ ಸ್ವಾಗತಿಸಿದರು. ಶಿಕ್ಷಕ ಪಿ.ಎಸ್.ಅಗ್ನಿ ವಂದಿಸಿದರು.
ಕೋಟ್
“ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಅವರ ಬೇಡಿಕೆಯಂತೆ ಕುರಿಗಾಯಿಗಳ ಅಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ರೂಪಿಸಲಾಗಿದೆ. ಸಮಾಜವು ಪ್ರಗತಿ ಪಥದಲ್ಲಿ ಸಾಗಬೇಕಾದರೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಅಗತ್ಯ. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಮಾತ್ರ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯ.”
– ಡಾ.ಯತೀಂದ್ರ ಸಿದ್ದರಾಮಯ್ಯ
ಸಚಿವರು

