ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜಿನಲ್ಲಿ ಮಂಗಳಾನಾಥನಂದಜೀ ಮಹಾರಾಜ್‌ರಿಂದ ವಿಶೇಷ ಉಪನ್ಯಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನನ್ನಲ್ಲಿ ಅನವರತ ಶಕ್ತಿ ಇದೆ. ನಾನು ಏನನ್ನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಉಕ್ತಿಯು ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಂತ್ರವಾಗಿರಬೇಕು. ಅದನ್ನು ಸದಾ ಜಪಿಸುತ್ತಲೇ ಇರಬೇಕು. ಆಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ದ್ವಿಗುಣಗೊಳ್ಳುವುದರ ಜೊತೆಗೆ ಸಾಧನೆಯ ಶಿಖರವೇರುವುದಕ್ಕೆ ಸಾಧ್ಯ ಎಂದು ಬಳ್ಳಾರಿಯ ರಾಮಕೃಷ್ಣ ಮಿಶನ್ ಕಾರ್ಯದರ್ಶಿ ಪ. ಪೂ ಮಂಗಳಾನಾಥನಂದಜೀ ಮಹಾರಾಜ್ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ‘ಆತ್ಮವಿಶ್ವಾಸ ವೃದ್ಧಿ ಹಾಗೂ ಮನೋನಿರ್ವಹಣೆ’ ಎನ್ನುವ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು; ಬದುಕಿನಲ್ಲಿ ಬರೀ ಗೆಲವು ಕಂಡವನು ಎಂದೂ ಯಶಸ್ವಿಯಾಗಲಾರ. ಸೋತು ಗೆದ್ದವರು ಮಾತ್ರ ಯಶಸ್ವಿಯಾಗುತ್ತಾರೆ. ಆ ಸಾಧನೆಯ ಮಾರ್ಗದಲ್ಲಿ ಸಾಗುವಾಗ ನನ್ನಿಂದ ಎಲ್ಲವೂ ಸಾಧ್ಯ. ನಾನು ಅಂದುಕೊಂಡದ್ದನ್ನು ಮಾಡಿ ತೋರಿಸುತ್ತೇನೆ ಎನ್ನುವ ಛಲ ಮೂಡಿಸಿಕೊಳ್ಳಬೇಕು. ಸೋಲುತ್ತೇನೆಂಬ ಭಯವೂ ಇರಬಾರದು, ಸೋತೆನೆಂಬ ಹತಾಸೆಯು ಇರಬಾರದು. ಸೋತರು ಸರಿ ಮತ್ತೆ ಮತ್ತೆ ಯತ್ನಿಸಿ ಗೆಲ್ಲುತ್ತೇನೆಂಭ ಮನೋದಾರ್ಢ್ಯತೆ ಇರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಮನೋದಾರ್ಢ್ಯತೆ ಎನ್ನುವ ಧಿವ್ಯ ಔಷಧ ನಮ್ಮಲ್ಲಿ ಇದ್ದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಾಲ್ಕು ಬಾರೀ ಫೇಲ್ ಆದವನು ಸಹ ಮುಂದೆ ಐಎಎಸ್ ಪಾಸು ಮಾಡಿದಂತ ಉದಾಹರಣೆಗಳಿವೆ. ಆ ಕಾರಣದಿಂದಾಗಿ ಸದೃಢ ಶರೀರದ ಜೊತೆಗೆ ಸದೃಢ ಮನಸ್ಸು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ಮಂಡಳಿ ಹಾಜರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.

