ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಅಖಂಡ ಬಸವನ ಬಾಗೇವಾಡಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಅಂಗವಾಗಿ ಹೂವಿನ ಹಿಪ್ಪರಗಿಯ ಶ್ರೀ ಯೋಗೇಶ್ವರಿ ಮಾತಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಪವಾಡ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಶನಿವಾರ ಮತ್ತು ಭಾನುವಾರ ವಾಲಿಬಾಲ್ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟದಲ್ಲಿ ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
“ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ” ಎಂದು ಶುಭ ಹಾರೈಸಿದ್ದಾರೆ.

