ವಾಹನ ಕಾಯ್ದೆ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ | ವಿಜಯಪುರದಲ್ಲಿ 6,267 ಪ್ರಕರಣ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 6,267 ಪ್ರಕರಣಗಳನ್ನು ದಾಖಲಿಸಿ ₹30.52 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕರ ನಿರ್ದೇಶನದಂತೆ ಬೆಳಗಾವಿ ವಲಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಆ.17ರಿಂದ 23ರವರೆಗೆ ವಿಶೇಷ ಸಂಚಾರ ಅಭಿಯಾನ ಕೈಗೊಳ್ಳಲಾಗಿತ್ತು.
ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು, ಟ್ರಿಪಲ್ ರೈಡಿಂಗ್, ಅತಿವೇಗ, ಅಜಾಗರೂಕ ಚಾಲನೆ, ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಸಂಚಾರ ನಿಯಮಗಳ ಉಲ್ಲಂಘನೆಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದ 1,634 ಪ್ರಕರಣಗಳಿಗೆ ₹8.17 ಲಕ್ಷ, ಸೀಟ್ ಬೆಲ್ಟ್ ಧರಿಸದ 916 ಪ್ರಕರಣಗಳಿಗೆ ₹4.62 ಲಕ್ಷ, ಟ್ರಿಪಲ್ ರೈಡಿಂಗ್‌ನ 513 ಪ್ರಕರಣಗಳಿಗೆ ₹2.56 ಲಕ್ಷ ಹಾಗೂ ಅಪಾಯಕಾರಿ ರೀತಿಯಲ್ಲಿ ವಾಹನ ನಿಲುಗಡೆ ಮಾಡಿದ 134 ಪ್ರಕರಣಗಳಿಗೆ ₹67 ಸಾವಿರ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಅದೇ ರೀತಿ, ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಿದ 1,055 ಪ್ರಕರಣಗಳಿಗೆ ₹5.27 ಲಕ್ಷ, ದಾಖಲೆ/ಸಮವಸ್ತ್ರ ಇಲ್ಲದ 365 ಪ್ರಕರಣಗಳಿಗೆ ₹1.82 ಲಕ್ಷ, ಲೇನ್ ಶಿಸ್ತು ಉಲ್ಲಂಘನೆಯ 120 ಪ್ರಕರಣಗಳಿಗೆ ₹60 ಸಾವಿರ, ಅತಿವೇಗದ 25 ಪ್ರಕರಣಗಳಿಗೆ ₹25 ಸಾವಿರ, ನಂಬರ್ ಪ್ಲೇಟ್ ಇಲ್ಲದ 170 ಪ್ರಕರಣಗಳಿಗೆ ₹85 ಸಾವಿರ ಹಾಗೂ ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆಯ 807 ಪ್ರಕರಣಗಳಿಗೆ ₹43,500 ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ದೋಷಪೂರಿತ ನಂಬರ್ ಪ್ಲೇಟ್‌ಗೆ ಸಂಬಂಧಿಸಿದ 56 ಪ್ರಕರಣಗಳಿಗೆ ₹28 ಸಾವಿರ ಹಾಗೂ ಇತರ 313 ಪ್ರಕರಣಗಳಿಗೆ ₹4.98 ಲಕ್ಷ ದಂಡ ವಿಧಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 6,267 ಪ್ರಕರಣಗಳಲ್ಲಿ ₹30,52,550 ದಂಡ ವಸೂಲಿ ಮಾಡಲಾಗಿದೆ.
ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಒಟ್ಟು 17,632 ಪ್ರಕರಣಗಳು ದಾಖಲಾಗಿದ್ದು, ₹78,58,150 ದಂಡ ವಸೂಲಿ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ವೇಗ ಬೇಡ–ಜೀವ ಮುಖ್ಯ :ಎಸ್ಪಿ ನಿಂಬರಗಿ ಸಲಹೆ
“ಸಂಚಾರ ನಿಯಮ ಪಾಲನೆ–ಜೀವ ರಕ್ಷಣೆಯ ಸಾಧನೆ”, “ಸೀಟ್ ಬೆಲ್ಟ್ ಹಾಕಿ–ಸುರಕ್ಷಿತ ಪ್ರಯಾಣ ಮಾಡಿ”, “ಹೆಲ್ಮೆಟ್ ಧರಿಸಿ–ಜೀವ ಉಳಿಸಿ” ಹಾಗೂ “ಸುರಕ್ಷಿತ ಚಾಲನೆ–ಸುಂದರ ಜೀವನ” ಎಂಬ ಸಂದೇಶಗಳ ಮೂಲಕ ಸಾರ್ವಜನಿಕರಲ್ಲಿ ಸಂಚಾರ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಅಪಘಾತರಹಿತ ವಿಜಯಪುರ–ನಮ್ಮೆಲ್ಲರ ಸಂಕಲ್ಪ”ದೊಂದಿಗೆ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ತಮ್ಮ ಹಾಗೂ ಇತರರ ಜೀವದ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

