ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಹಾಗೂ ದೇವರಹಿಪ್ಪರಗಿ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ನಡೆದ ೩ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಬಿಜೆಪಿ ಮಂಡಲ ಪದಾಧಿಕಾರಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಧರಣಿ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮಂಡಲ ಪದಾಧಿಕಾರಿಗಳು ಪಾಲ್ಗೊಂಡು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಮಲ್ಕು ಬಾಗೇವಾಡಿ ಮಾತನಾಡಿ, ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ೨೦೨೧-೨೨ ರಿಂದ ೨೦೨೫-೨೬ ರವರೆಗೆ ಕೃಷಿ ಭಾಗ್ಯ ಯೋಜನೆಯ ಬದು ನಿರ್ಮಾಣ, ಕೃಷಿ ಹೊಂಡ ಹಾಗೂ ವಿಶೇಷ ಘಟಕ ಯೋಜನೆಯಲ್ಲಿ ಜಲಾನಯನ ಕೃಷಿ ಸಿಂಚನ ಸಹಿತ ಹಲವು ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು ಇವುಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬ ಡಿಎಸ್‌ಎಸ್ ಬೇಡಿಕೆಗೆ ಧ್ವನಿಗೂಡಿಸಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ದೊಡಮನಿ ಮಾತನಾಡಿ, ವಿಜಯಪುರ ಜಿಲ್ಲೆಯನ್ನು ಪ್ರಾದೇಶಿಕ ಮೀಸಲಾತಿ ಅಡಿ ಸೇರಿಸಿ ೩೭೧(ಜೆ) ಸೌಲಭ್ಯಗಳನ್ನು ನೀಡಲು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಸಂಘಟನಾ ಸಂಚಾಲಕ ಬಸವರಾಜ ಇಂಗಳಗಿ, ರಮೇಶ ಈಳಗೇರ, ಜಗದೀಶ ಚವ್ಹಾಣ, ಶ್ರೀಕಾಂತ ಬಜಂತ್ರಿ, ಆಕಾಶ ಕೊಂಬಿನ, ಪ್ರಶಾಂತ ದೊಡಮನಿ, ರಮೇಶ ಬನ್ಸೋಡೆ, ಯಮನಪ್ಪ ಭೂತಾಳಿ, ದಾದಾ ಶಾಹಪೂರ, ದಯಾನಂದ ರಾಠೋಡ ಇದ್ದರು.

