ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ನಗರದ ಜತ್ತ ರಸ್ತೆಯ ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಉಪವಿಭಾಗ ಕಚೇರಿ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೃಷಿ ಪ್ರಧಾನವಾಗಿರುವ ಅಥಣಿ ತಾಲೂಕಿನಲ್ಲಿ ನೀರಿನ ಲಭ್ಯತೆ ಹಾಗೂ ಸಮರ್ಪಕ ನಿರ್ವಹಣೆ ರೈತರ ಆರ್ಥಿಕ ಪ್ರಗತಿಗೆ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಯೋಜನೆಗಳು ಅಂತರ್ಜಲ ಸಂರಕ್ಷಣೆ ಹಾಗೂ ನೀರಿನ ಸದ್ಬಳಕೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಚಿವ ಸವದಿ ಅವರು ತಿಳಿಸಿದರು.
ರೈತರಿಗೆ ಆಡಳಿತಾತ್ಮಕ ಸೇವೆ ಸುಲಭ:
ಉಪವಿಭಾಗ ಕಚೇರಿ ನಿರ್ಮಾಣದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ. ತಾಲೂಕಿನ ರೈತರು ಹಾಗೂ ಸಾರ್ವಜನಿಕರು ಇಲಾಖೆಯ ಸೇವೆಗಾಗಿ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಲಿದ್ದು ಸ್ಥಳೀಯವಾಗಿಯೇ ಅಗತ್ಯ ಸೇವೆ ಹಾಗೂ ಮಾರ್ಗದರ್ಶನ ಪಡೆಯಲು ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ವೇಗ :ತಾಲೂಕಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯಗಳಿಗೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗುಣಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣ ವಾಲಿ, ಪ್ರವೀಣ ಹುಣಸಿಕಟ್ಟಿ, ಮಲ್ಲಿಕಾರ್ಜುನ ಮಗದುಮ, ಬಸಗೌಡ ಕಾಗೆ, ಪ್ರವೀಣ ಪಾಟೀಲ, ಕಂದಾಯ ನಿರೀಕ್ಷಕ ಸಂತೋಷ ಬಾಯನಾಯಕ, ಮಾಂತೇಶ ಅಂಬೋಲಿ, ರಾಮಗೊಂಡ ಪಾಟೀಲ, ಶಬ್ಬೀರ ಪಾರ್ಥನಳ್ಳಿ, ಎಸ್ ಐ ಶೇಗುಣಸಿ, ಪ್ರಾಚಾರ್ಯ ವಿಲಾಸ್ ಕಾಂಬಳೆ, ಪುರಸಭೆ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಶಿವಾನಂದ ದಿವಾನಮಳ, ರಮೇಶ ಗಾಣಿಗೇರ, ಅರುಣ್ ಯಲಗುದ್ರಿ, ರಾಜು ಗುಡೋಡಗಿ, ಮಲ್ಲು ಹುದ್ದಾರ, ಸುಂದರ ಸೌದಾಗರ, ಕಲ್ಲೇಶ ಮಡ್ಡಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಜಿ ಎಸ್ ಉಪ್ಪಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮುಖಂಡರು, ನಗರಸಭೆ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

