ಶಾಸಕ ಯಶವಂತರಾಯಗೌಡ ಪಾಟೀಲ ರಿಂದ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ನೀರನ್ನು ಬಿಡಲಾಗುತ್ತಿದ್ದು ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಿ ಹಳ್ಳ ಕೊಳ್ಳಗಳಿಗೆ ನೀರನ್ನು ಬಿಟ್ಟು ಯಾವದೇ ಗ್ರಾಮಕ್ಕೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದೆಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರವಾಸಿಮಂದಿರಲದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ಕೃಷ್ಣಾ ಕಾಲುವೆಯ ಕೊನೆಯ ಭಾಗದ ವರೆಗೂ ನೀರು ಹರಿಸಿ ಯಾವ ಗ್ರಾಮಕ್ಕೂ ಕುಡಿಯುವ ನೀರಿನ ತೊಂದರೆ ಆಗಬಾರದು. ಅವಶ್ಯವೆನಿಸಿದಂತೆ ಅಧಿಕಾರಿ ಸರಿಯಾದ ವ್ಯವಸ್ಥೆ ಮಾಡಬೇಕು ಎಂದರು.
ಹಿರೇರೂಗಿ ಗ್ರಾಮದ ಜನರು ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ ಪ್ರತಿಭಟನೆ ಮಾಡಿದ್ದು ಅವರಿಗೆ ನೀರು ಪೂರೈಸಲು ಕೃಷ್ಣಾ ಮೇಲ್ದಂಡೆ ಯೋಜನೆ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಒ ಮಹಾದೇವಪ್ಪ ಏವೂರ ಮಾತನಾಡಿ ತಾಲೂಕಿನಲ್ಲಿ ಮಳೆಯ ಕೊರತೆ ಇದೆ. ಅಗಸ್ಟ ತಿಂಗಳಲ್ಲಿ ೬೪ ಮಿ ಮಿ ಮಳೆ ಆಗಬೇಕಾಗಿತ್ತು. ಆದರೆ ಕೇವಲ ೨೩ ಮೀ ಮೀ ಮಳೆಯಾಗಿದೆ. ಶೇ ೬೦ ರಷ್ಟು ಪ್ರಮಾಣ ಮಳೆಯ ಕೊರತೆ ಇದೆ. ಇದರಿಂದ ಬೆಳೆಗಳು ಬಾಡುತ್ತಿವೆ. ತೇವಾಂಶ ಕಡಿಮೆಯಾಗಿ ಬೆಳೆಗಳ ಮೇಲೆ ಪರಿಣಾಮ ಬಿರುತ್ತಿದೆ.ಬಾವಿ ಬೋರ್ ಗಳಿಗೆ ನೀರು ಕಡಿಮೆಯಾಗುತ್ತಿದೆ. ಬೆಳೆ ಪ್ರಮಾಣ ಕುಂಠಿತ ಗೊಳ್ಳುತ್ತಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಶ್ರೀಮಂತ ಅಂಗಡಿ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ದಯಾನಂದ ಮಠ, ಗ್ರಾಮೀಣ ನೀರು ಸರಬರಾಜು ಮಂಡಳಿಯ ಎಸ್.ಆರ್ ಬಂಡಿ, ಹೆಸ್ಕಾಂನ ಎಸ್.ಆರ್.ಮೆಂಡೆಗಾರ, ತೋಟಗಾರಿಕೆ ಇಲಾಖೆಯ ಸತೀಶ ಬಡಿಗೇರ, ಪಶು ಸಂಗೋಪನಾ ಇಲಾಖೆಯ ಡಾ. ರಾಜಕುಮಾರ ಅಡಕಿ, ಎಡಿಎಲ್ ಆರ್ ಕಾಂಬಳೆ, ಚಿಕ್ಕ ನೀರಾವರಿಯ ಎಇಇ ಸಂದೀಪ ಕಡಬಾಕಿ ಮತ್ತಿತರಿದ್ದರು.

