ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಐತಿಹಾಸಿಕ ರಾಮತೀರ್ಥ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪಡಗಾನೂರ ಕ್ರಾಸ್ ಮೂಲಕ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.
ಪಟ್ಟಣದ ನಿವಾಸಿ ಶಿವಾನಂದ ಕುಂಬಾರ ಈ ಕುರಿತು ಮಾತನಾಡಿ, ಮುಳಸಾವಳಗಿ, ಶಿವಣಗಿ, ಇಂಗಳಗಿ ಗ್ರಾಮಗಳ ಮಧ್ಯೆದಲ್ಲಿನ ರಾಮತೀರ್ಥ ಪ್ರಸಿದ್ಧ ಧಾರ್ಮಿಕ ತಾಣವಾಗಿದ್ದು, ಪ್ರತಿವರ್ಷ ಶ್ರಾವಣ ಮಾಸದ ಮೂರನೆಯ ಸೋಮವಾರ ಜಾತ್ರೆ ಜರುಗುತ್ತದೆ. ಇದು ರಾಮತೇರ ಜಾತ್ರೆ ಎಂದೇ ಜನಜನಿತವಾಗಿದೆ. ಇಲ್ಲಿಗೆ ದೇವರಹಿಪ್ಪರಗಿಯ ಕಲ್ಮೇಶ್ವರ, ಕರಿಸಿದ್ಧೇಶ್ವರ ಸಹಿತ ಪಡಗಾನೂರ, ಇಂಗಳಗಿ, ನಿವಾಳಖೇಡ, ಹಡಗಲಿ, ಮುಳಸಾವಳಗಿ ದೇವರ ಪಲ್ಲಕ್ಕಿಗಳು ಆಗಮಿಸಿ ಭಕ್ತರಿಗೆ ದರ್ಶನ ನೀಡುತ್ತವೆ.
ಜಾತ್ರೆಯ ಅಂಗವಾಗಿ ಸಾವಿರಾರು ಜನರು ಕಾಲುನಡಿಗೆ, ದ್ವಿಚಕ್ರ ಸಹಿತ ವಿವಿಧ ವಾಹನಗಳ ಮೂಲಕ ಆಗಮಿಸುತ್ತಾರೆ. ಆದರೆ ಈ ರಸ್ತೆ ಈಗ ಸಂಪೂರ್ಣ ಹಾಳಾಗಿ ನಡೆಯಲು ಬಾರದಂತಾಗಿದೆ. ಜೊತೆಗೆ ರಸ್ತೆಯ ಎಡಬಲಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ತೊಂದರೆ ಉಂಟು ಮಾಡುತ್ತಿವೆ ಎನ್ನುತ್ತಾರೆ.
ಜಾತ್ರೆಯ ಮುನ್ನ ಮುಳಸಾವಳಗಿ, ಶಿವಣಗಿ ಗ್ರಾಮ ಪಂಚಾಯಿತಿ ಹಾಗೂ ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಈ ಕುರಿತು ಕ್ರಮ ಕೈಗೊಂಡು ಬರುವ ಭಕ್ತರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪಟ್ಟಣದ ಚಿನ್ಮಯ ಕೋರಿ, ಕಾಶೀನಾಥ ಸಾಲಕ್ಕಿ, ಯಲಗೂರೇಶ ದೇವೂರ, ರಾವುತ ಅಗಸರ, ನಾಗೇಂದ್ರ ಇಂಡಿ, ರಮೇಶ ಈಳಗೇರ, ಬಸವರಾಜ ಕಲ್ಲೂರ (ಮುಳಸಾವಳಗಿ), ಸಿದ್ಧನಗೌಡ ಗೋಡ್ಯಾಳ(ಇಂಗಳಗಿ), ಚನ್ನಪ್ಪ ಕಾರಜೋಳ (ನಿವಾಳಖೇಡ) ಆಗ್ರಹಿದ್ದಾರೆ.

